ಕುಂದಾಪುರ: ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಕ್ಷೇತ್ರದಲ್ಲಿ ಚಂಪಾಷಷ್ಠಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆದರೇ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಸಲ್ಲಿಸಿ ಪುನೀತರಾದರು.
ಮೊದಲ ದಿನ ಷಣ್ಣಾಳಿಕೇರ ಗಣಹೋಮ, ಶ್ರೀ ಕಾಳಿಂಗ ದೇವರಿಗೆ ನವಕುಂಭ ಸ್ನಪನ, ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಶ್ರೀ ದುರ್ಗಾದೇವಿಗೆ ಚಂಡಿಕಾ ಪಾರಾಯಣ ನಡೆದವು. ಷಷ್ಠಿಯ ದಿನದಂದು ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಕಾಳಾವರ ಕ್ಷೇತ್ರದಲ್ಲಿ ವೇ.ಮೂ ಚೆನ್ನಕೇಶವ ಭಟ್ ಸಾರಥ್ಯದಲ್ಲಿ ದೇವರಿಗೆ ಅಭಿಷೇಕ, ಪಂಚಾಮೃತ ಪೂಜೆ, ತೀರ್ಥಾಭಿಷೇಕ, ಪಲ್ಲಪೂಜೆ ಜರುಗಿದರೇ, ಭಕ್ತರಿಂದ ಉರುಳು ಸೇವೆ ನಡೆಯಿತು. ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.