Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಕಾಲೇಜು: ವಾರ್ಷಿಕ ಕ್ರೀಡೋತ್ಸವ ಉದ್ಘಾಟನೆ

ಕೊಲ್ಲೂರು: ಉತ್ತಮ ಆರೋಗ್ಯ, ಮನರಂಜನೆ ಹಾಗೂ ಯಶಸ್ಸು ಕ್ರೀಡೆಯಿಂದ ಸಿಗುತ್ತದೆ. ಇದರ ಜೊತೆ ತಾಳ್ಮೆ, ಇತರರೊಂದಿಗೆ ಮಧುರ ಬಾಂಧವ್ಯ ಹಾಗೂ ನಿಕಟ ಸಂಪರ್ಕದಿಂದ ನಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ನಿರ್ಮಾಣವಾಗುತ್ತದೆ. ಕ್ರೀಡಾಪಟುಗಳು ಸ್ಪರ್ಧಾತ್ಮಕ ನೀತಿ-ನಿಯಮಗಳಿಗೆ ಬದ್ದರಾಗಿರಬೇಕು. ಈ ತತ್ವಗಳನ್ನು ನಿತ್ಯಜೀವನದಲ್ಲಿಯೂ ಅಳವಡಿಸಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡಾ ಗುರುತಿಸಿಕೊಳ್ಳಲು ಸಾಧ್ಯ ಎಂದು ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಸಂತ್ ಶೆಟ್ಟಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಧ್ವಜಾರೋಹಣ ಮಾಡಿದ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದನ್ನು ಧೃಡಚಿತ್ತದಿಂದ ಆಯ್ಕೆ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ದ್ವಂದ್ವ ನಿಲುವು ಬೇಡ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯಿರಲಿ. ಯಾವುದೇ ಕಾರಣಕ್ಕೂ ಆಕರ್ಷಣೆಗೆ ಒಳಗಾಗದೇ ಉತ್ತಮವಾಗಿದ್ದನ್ನೆ ಆಯ್ಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕ್ರೀಡಾ ಜ್ಯೋತಿ ಬೆಳಗಿದ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಅತುಲ್‌ಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ಇಂದಿನ ಆಹಾರ ಪದ್ದತಿಗಳಿಂದ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಕಡಿಮೆಯಾಗಿದೆ. ಸಕಾರಾತ್ಮಕ ಚಿಂತನೆಗಳು ನಮ್ಮ ಮೆದುಳನ್ನು ಮತ್ತು ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಒಳ್ಳೆಯ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಹಿತ-ಮಿತವಾದ ಆಹಾರ ಸೇವನೆಯ ಜೊತೆಗೆ ಶರೀರ ದಂಡಿಸಲು ನಿತ್ಯ ವ್ಯಾಯಾಮ ಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಅಧ್ಯಕ್ಷತೆ ವಹಿಸಿ ಕ್ರೀಡಾಪಟುಗಳ ಪಥ ಸಂಚಲನದಲ್ಲಿ ವಂದನೆ ಸ್ವೀಕರಿಸಿದರು. ಕಾಲೇಜಿನ ರಾಷ್ಟ್ರೀಯ ಕ್ರೀಡಾ ಪ್ರತಿಭೆ ಪ್ರತಿಕ್ಷಾ ಪ್ರತಿಜ್ಞಾವಿಧಿ ಬೋಧಿಸಿದರು. ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಸಂತ್ ಶೆಟ್ಟಿಯವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಕೇಶ್ ಶೆಟ್ಟಿ, ಸಚಿನ್ ಶೆಟ್ಟಿ ಉಪಸ್ಥಿರಿದ್ದರು. ಕಾಲೇಜಿನ ಪ್ರಾಂಶುಪಾಲ ಅರುಣ್‌ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ನಾಗರಾಜ ಭಟ್ ವಂದಿಸಿದರು. ನಾಗರಾಜ ಅಡಿಗ ನಿರೂಪಿಸಿದರು.

Exit mobile version