ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹ್ಯೂಮನ್ ವ್ಯಾಲ್ಯೂಸ್ & ಪ್ರೊಫೆಷನಲ್ ಎಥಿಕ್ಸ್ ಘಟಕ ಹಾಗೂ ಮಾನವ ಹಕ್ಕುಗಳ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ ಅವರು ಮಾತನಾಡಿ, ಮಾನವ ಹಕ್ಕುಗಳ ಅರಿವು ಪ್ರತಿಯೊಬ್ಬ ಮನುಷ್ಯನಿಗೂ ಅತ್ಯವಶ್ಯಕ. ವ್ಯಕ್ತಿ ಗೌರವ, ಹಕ್ಕುಗಳು, ಸ್ವಾತಂತ್ರ್ಯ, ಮಾನವೀಯ ಮೌಲ್ಯಗಳು ಮಾನವ ಹಕ್ಕುಗಳ ಪರಿಕಲ್ಪನೆಯಲ್ಲಿ ಅಡಕವಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಮಾನವ ಹಕ್ಕುಗಳ ಕುರಿತು ತಿಳಿದು ಬದುಕಬೇಕಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಇನ್ನೋರ್ವ ಸಂಯೋಜಕರು ಹಾಗೂ ಡೀನ್ ಅಕಾಡೆಮಿಕ್ ಗಿರಿರಾಜ ಭಟ್, ಮಾನವ ಹಕ್ಕುಗಳ ಘಟಕದ ಸಂಯೋಜಕರಾದ ಸುಧೀರ್ ಕುಮಾರ್ ಹಾಗೂ ಶ್ವೇತಾ ಭಂಡಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಜಯ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಶ್ರೀಶಾಂತ್ ಪ್ರಾರ್ಥಿಸಿದರು. ಹ್ಯೂಮನ್ ವ್ಯಾಲ್ಯೂಸ್ & ಪ್ರೊಫೆಷನಲ್ ಎಥಿಕ್ಸ್ ಘಟಕದ ಸಂಯೋಜಕರು ಹಾಗೂ ಉಪ ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ರಾಕೇಶ್ ನಿರೂಪಿಸಿದರು.