ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಬ್ಯಾಂಕ್ ಮಿತ್ರ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಪೂರ್ಣಾನಂದ ಅವರು ಭಾರತದ ಒಟ್ಟಾರೆ ಆರ್ಥಿಕತೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯನ್ನು ಅವಲಂಬಿಸಿದೆ. ಇದು ಸಾಧ್ಯವಾಗಬೇಕಾದರೆ, ಆರ್ಥಿಕ ಚಟುವಟಿಕೆಗಳಿಂದ ಹೊರಗುಳಿದವರ ಸೇರ್ಪಡೆ ಅನಿವಾರ್ಯ. ಹಾಗಾಗಿ ಕೊನೆಯ ಹಂತದ ಸಂಪರ್ಕವನ್ನು ಪ್ರಯತ್ನಿಸುವ ಬ್ಯಾಂಕ್‌ನ ಪ್ರತಿನಿಧಿಯಾಗಿ ಸೇವೆಯನ್ನು ನೀಡುವ ವ್ಯವಸ್ಥೆ ಇದಾಗಿದೆ. ಈಗಾಗಲೇ ಬ್ಯಾಂಕ್ ಮಿತ್ರ ಯೋಜನೆಯು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಕಮಿಷನ್‌ಗಾಗಿ ಕೆಲಸವನ್ನು ಮಾಡಬೇಡಿ, ಇದನ್ನು ಸೇವೆಯೆಂದು ಮನಗಂಡು ಕೆಲಸವನ್ನು ಮಾಡಿದಲ್ಲಿ ಖಂಡಿತವಾಗಿ ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ತಾನಮಾನಗಳು ದೊರೆಯುತ್ತದೆ. ಬ್ಯಾಂಕ್‌ಗೆ ಪೂರಕವಾಗಿ ಕಾರ್ಯವನ್ನು ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿ ಶಿಬಿರಾರ್ಥಿಗಳಿಗೆ ಪುಸ್ತಕವನ್ನು ವಿತರಿಸಿ, ಶುಭ ಹಾರೈಸಿದರು.

ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಹರೀಶ್ ಮಾತನಾಡಿ, ಬ್ಯಾಂಕ್ ಮಿತ್ರ ಯೋಜನೆಯ ಮುಖ್ಯ ಉದ್ದೇಶ ಬ್ಯಾಂಕ್ ಶಾಖೆಗಳಿಲ್ಲದಲ್ಲಿಗೆ ಮತ್ತು ಇಲ್ಲಿಯ ತನಕ ಬ್ಯಾಂಕಿಂಗ್ ಸೌಲಭ್ಯಗಳಿಂದ ಹೊರಗುಳಿದವರಿಗೆ, ಬ್ಯಾಂಕಿಂಗ್ ಸೇವೆಯನ್ನು ಒದಗಿಸುವುದು. ಹಾಗಾಗಿ ಬ್ಯಾಂಕ್ ಮಿತ್ರ ಅಭ್ಯರ್ಥಿಗಳು ಬ್ಯಾಂಕ್ ನ ಪ್ರತಿನಿಧಿಗಳು. ಶಾಖೆ ಮತ್ತು ಸುತ್ತಮುತ್ತಲಿನ ಜನರ ನಡುವಿನ ಸೇತುವೆ. ತರಬೇತಿಯನ್ನು ಶ್ರದ್ಧೆಯಿಂದ ಪಡೆದುಕೊಂಡು ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಎಂದು ಹೇಳಿ ಶುಭ ಹಾರೈಸಿದರು.
ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಬೊಮ್ಮಯ್ಯ ಎಂ. ಮಾತನಾಡಿ, ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆಯಿರಿ ಯಶಸ್ವಿಯಾಗಿ, ಅನುಭವಿ ತರಬೇತಿದಾರರನ್ನು ಕರೆಸಿ, ತರಬೇತಿಯನ್ನು ನೀಡುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ. ಹಾಗಾಗಿ ಐಐಬಿಎಫ್ ಪರೀಕ್ಷೆಯನ್ನು ಉತ್ತಮವಾಗಿ ಬರೆದು ಉತ್ತೀರ್ಣರಾಗಿ. ಸಾಮಾನ್ಯ ಜನರಿಗೆ ನಿಮ್ಮಿಂದ ಬ್ಯಾಂಕಿಂಗ್ ಕ್ಷೇತ್ರದ ಕುರಿತಾಗಿ ಉತ್ತಮ ಮಾಹಿತಿಗಳು ಲಭಿಸಲಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಮಿತ್ರ ತರಬೇತುದಾರರಾದ ಸುಂದರೇಶ, ಬ್ಯೂಟಿ ಪಾರ್ಲರ್ ತರಬೇತಿಯ ಅತಿಥಿ ಉಪನ್ಯಾಸಕಕಿ ರಾಜಲಕ್ಷ್ಮೀ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕರು ಚೈತ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕ ಸಂತೋಷ್ ಸ್ವಾಗತಿಸಿ, ಕಚೇರಿ ಸಹಾಯಕ ಶಾಂತಪ್ಪ ವಂದಿಸಿದರು.