Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ.ಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಅವಿನಾಭಾವ ಸಂಬಂಧ. ವಿದ್ಯಾರ್ಥಿ ದಿಸೆಯಲ್ಲಿ ಪಡೆದ ಅನುಭವ ಜೀವನಕ್ಕೆ ಪ್ರೇರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧಿಸುವ ಛಲ ಹೊಂದಿರಬೇಕು. ಪೈಪೋಟಿಯ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಜೊತೆಯಲ್ಲಿ ಕೌಶಲ್ಯ ಬೇಕು. ಮಾತನಾಡುವ ಕಲೆ, ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಇರಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಿ. ಸುರೇಶ ತುಂಗ ಹೇಳಿದರು.

ಅವರು ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶುಕ್ರವಾರ ಜಿ.ಎಸ್.ವಿ. ಅಸೋಸಿಯೇಶನ್ ಗಂಗೊಳ್ಳಿ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಬೆಳೆಯಬೇಕಾದರೆ ನಾವು ಬದಲಾಗಬೇಕು. ಬದಲಾಗಬೇಕಾದರೆ ಕಲಿಯಬೇಕು. ಕಲಿಯಬೇಕಾದರೆ ತೆರೆದುಕೊಳ್ಳಬೇಕು. ನಮ್ಮನ್ನು ನಾವು ಹೊರ ಜಗತ್ತಿಗೆ ಸಮರ್ಪಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಉತ್ಸಾಹ ಮತ್ತು ಹಂಬಲ ಇರಬೇಕು. ನಮ್ಮ ಸುತ್ತಮುತ್ತಲು ಇರುವ ಅವಕಾಶಗಳನ್ನು ನೋಡುತ್ತಿರಬೇಕು. ಇವೆಲ್ಲದರ ಮಧ್ಯೆ ತಾಳ್ಮೆ ಅವಶ್ಯಕ. ಮಾತು ಸಾಧನೆಯಾಗಬಾರದು. ಸಾಧನೆ ಮಾತು ಆಗಬೇಕು. ಒಳ್ಳೆಯ ಪರಂಪರೆಯನ್ನು ಹಾಕಿಕೊಂಡು ಬಂದಿರುವ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಅವರು ಹೇಳಿದರು.

ಜಿ.ಎಸ್.ವಿ. ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ ಸಬಿನಾ ಬಾನು ಯು. ಸ್ವಸ್ತಿ ವಾಚನ ಮಾಡಿದರು. ಇದೇ ಸಂದರ್ಭ 2024-25ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶ್ರಾವ್ಯ ಅವರಿಗೆ ದಿ.ಬಾಂಡ್ಯ ರವಿ ಪೈ ಸ್ಮರಣಾರ್ಥ ಬಾಂಡ್ಯ ಪಾಂಡುರಂಗ ಪೈ ಸಹೋದರರು ಕೊಡ ಮಾಡಿದ ಚಿನ್ನದ ಪದಕ ಹಾಗೂ ನಗದು ನೀಡಿ ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆಗೈದ ಹಾಗೂ ಶೈಕ್ಷಣಿಕ ಸ್ಪರ್ಧೆಗಳಲ್ಲಿ ಮತ್ತು ಪಠ್ಯ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಎನ್. ಸದಾಶಿವ ನಾಯಕ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಮತ್ತು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ ವರದಿ ವಾಚಿಸಿದರು. ಸಪೇಕ್ಷಾ ಖಾರ್ವಿ ಮತ್ತು ಫಯಿಜಾ ನೂರ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಸುಗುಣ ಆರ್.ಕೆ. ಸಾಧಕ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಉಪನ್ಯಾಸಕ ಪ್ರವೀಣ್ ಕಾಮತ್ ಮತ್ತು ಶಿಕ್ಷಕ ಆದಿನಾಥ ಕಿಣಿ ದಾನಿಗಳ ವಿವರ ವಾಚಿಸಿದರು. ಉಪನ್ಯಾಸಕರಾದ ನಾರಾಯಣ ಈ.ನಾಯ್ಕ್, ಪವಿತ್ರಾ, ಪಲ್ಲವಿ ಮತ್ತು ಶಿಕ್ಷಕರಾದ ಲವೀನಾ ಸಾವಿಯಾ ಸಿಕ್ವೇರಾ ಹಾಗೂ ದೈ.ಶಿ.ಶಿಕ್ಷಕ ಸೂರಜ್ ಸಾರಂಗ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶ್ರಾವ್ಯ, ಮೆಹಕ್ ಖಾರ್ವಿ, ಗೌತಮಿ ಜಿ.ನಾಯಕ್, ಪ್ರಥ್ವಿ ಖಾರ್ವಿ ಮತ್ತು ಉಪನ್ಯಾಸಕಿ ಪ್ರಫುಲ್ಲಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಧಾಮಸ್ ಪಿ.ಎ. ವಂದಿಸಿದರು.

Exit mobile version