ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ಈ ಕೆಳಕಂಡ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಕಾಳುಮೆಣಸು, ಗೇರು, ಅಂಗಾಂಶ ಬೆಳೆ, ಹೈಬ್ರಿಡ್ ತರಕಾರಿ ಹೊಸ ತೋಟಗಳ ಸ್ಥಾಪನೆಗೆ ಶೇ. 50 ರ ಸಹಾಯಧನ, ಪ್ಲಾಸ್ಟಿಕ್ ಹೊದಿಕೆ ಅಳವಡಿಸಲು ಶೇ. 50 ರ ಸಹಾಯಧನ, ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ ಲಭ್ಯವಿದೆ.
ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ರೈತರಿಗೆ ಶೇ. 90 ರಷ್ಟು ಸಹಾಯಧನ ಲಭ್ಯವಿದ್ದು, ಮೊದಲ 5 ಎಕರೆ ವರೆಗೂ ಶೇ.90 ರಷ್ಟು ಹಾಗೂ ನಂತರ 5 ಎಕರೆಯಿಂದ 12.50 ಎಕರೆ ವರೆಗೂ ಮಾರ್ಗಸೂಚಿಯನ್ವಯ ಶೇ. 45 ರಂತೆ ಸಹಾಯಧನ ನೀಡಲಾಗುವುದು.
ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಉಚಿತ ವಿತರಣೆಯೊಂದಿಗೆ 4 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಪಾವತಿ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಬಹುದಾಗಿದೆ. ಕೃಷಿ ಯಾಂತ್ರೀಕರಣ ಉಪ ಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 50 ರ ಸಹಾಯಧನ ಲಭ್ಯವಿದೆ.
ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ಅರ್ಹ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ, ಆಧಾರ್ ಪ್ರತಿ, ಜಾತಿ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್, ಉಡುಪಿ ದೂ.ಸಂಖ್ಯೆ: 8095991105 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

