ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೈದರಾಬಾದ್: ಅಲ್ಲಿ ನಡೆಯುತ್ತಿರುವ ಬಿಸಿಸಿಐ 19 ವರ್ಷದೊಳಗಿನ ವನಿತೆಯರ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ನಾಯಕಿ, ಕುಂದಾಪುರ ಮೂಲದ ರಚಿತಾ ಹತ್ವಾರ್ ಸಿಡಿಸಿದ ಭರ್ಜರಿ ಶತಕದ ಸಾಹಸದಿಂದ ಕರ್ನಾಟಕ ತಂಡ ವಿದರ್ಭತಂಡವನ್ನು 29 ರನ್ ಗಳಿಂದ ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಪರ ಆರಂಭಿಕ ಆಟಗಾರ್ತಿ ರಚಿತಾ ಹತ್ವಾರ್ ಅವರು 156 ರನ್ (154 ಎಸೆತ, 21 ಬೌಂಡರಿ) ಗಳೊಂದಿಗೆ ನಾಯಕಿಯ ಆಟವನ್ನು ಆಡಿದರು. ಇವರಿಗೆ ಮೂರನೇ ಕ್ರಮಾಂಕದಲ್ಲಿ ಬಂದ ಶ್ರೇಯಾ ಸಿ. ಚೌಹಾಣ್ 57 ರನ್ (69 ಎಸೆತ, 6 ಬೌಂಡರಿ) ಉತ್ತಮ ಸಾಥ್ ನೀಡಿದರು. ನಿಗದಿತ 50 ಓವರ್‌ಗಳಲ್ಲಿ ಕರ್ನಾಟಕ ತಂಡ 7 ವಿಕೆಟ್ ಕಳೆದುಕೊಂಡು 284 ರನ್ ಪೇರಿಸಿತು. ವಿದರ್ಭ ಪರ ಧನಶ್ರೀ ಗುಜ್ಜರ್46 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
ಸವಾಲಿನ ಮೊತ್ತವನ್ನು ಬೆನ್ನತ್ತಿದ ವಿದರ್ಭ ತಂಡವು ಕರ್ನಾಟಕದ ಕರಾರುವಕ್ಕಾದ ಬೌಲಿಂಗ್ ನಿಂದಾಗಿ 48.1 ಓವರ್‌ಗಳಲ್ಲಿಯೇ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು, 255 ರನ್ ಗಳಿಸಷ್ಟೇ ಶಕ್ತವಾಯಿತು. ಇದರೊಂದಿಗೆ ಕರ್ನಾಟಕ ತಂಡ 29 ರನ್ ಗಳೊಂದಿಗೆ ಗೆದ್ದು ಪಂದ್ಯಾವಳಿಯಲ್ಲಿ ಶುಭಾರಂಭಮಾಡಿತು. ವಿದರ್ಭ ಪರ ಶ್ರದ್ಧಾನಬಿರಾ 71 ರನ್ (80 ಎಸೆತ, 5 ಬೌಂಡರಿ, 1 ಸಿರ್ಕ್ಸ) ಹಾಗೂ ಅಕ್ಷರಾ 72 ರನ್ (74 ಎಸೆತ, 7 ಬೌಂಡರಿ) ಗಳಿಸಿ, ಹೋರಾಟ ನಡೆಸಿದರೂ, ಪ್ರಯೋಜನವಾಗಿಲ್ಲ. ಕರ್ನಾಟಕ ಪರ ವಂದಿತಾ ರಾವ್ 49 ರನ್ನಿಗೆ 4 ವಿಕೆಟ್ ಹಾಗೂ ದೀಕ್ಷಾಜೆ. 53 ರನ್ನಿಗೆ 3 ವಿಕೆಟ್ ಪಡೆದು, ಮಿಂಚಿದರು.
ಕುಂದಾಪುರ ಮೂಲದ ಪ್ರತಿಭೆ:
16ರ ಹರೆಯದ ರಚಿತಾ ಅವರು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಂಡರ್-23 ದೇಶಿಯ ಟಿ-20 ಟೂರ್ನಿಯಲ್ಲಿ ಕರ್ನಾಟಕ ಪರ ಆಡಿದ್ದರು. ಈ ಬಾರಿಯ ಅಂರ್ಡ-19 ಟಿ-20 ಟೂರ್ನಿಯಲ್ಲಿ ಕರ್ನಾಟಕ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಮಹಾರಾಣಿ ಕಪ್ ಪಂದ್ಯಾವಳಿಯಲ್ಲೂ ಮಿಂಚಿದ್ದರು.

