Kundapra.com ಕುಂದಾಪ್ರ ಡಾಟ್ ಕಾಂ

ರಂಗಭೂಮಿಯಿಂದ ಸಮಾಜದ ಸವಾಲುಗಳನ್ನು ಎದುರಿಸುವ ಶಿಕ್ಷಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ರಂಗಭೂಮಿ ಎನ್ನುವುದು ರಂಗಸಜ್ಜಿಕೆಗೆ ಮಾತ್ರ ಸೀಮಿತವಲ್ಲ. ಸಮಾಜದ ಸವಾಲುಗಳನ್ನು ಎದುರಿಸುವ ಶಿಕ್ಷಣ ನಾಟಕಗಳಿಂದ ದೊರೆಯುತ್ತದೆ. ಜಗತ್ತಿಗೆ ಭಾರತ ದೇಶ ಪ್ರೇರಣೆಯಾಗಿದೆ. ನಾಟಕಗಳು ಜನಜಾಗ್ರತಿ ಮೂಲಕ ಸಮಾಜದಲ್ಲಿ ಬದಲಾವಣೆ ತಂದಿದೆ. ಕಲೆ ಮತ್ತು ಆಸಕ್ತಿ ಸದಾ ಕ್ರಿಯಾತ್ಮಕ ಚಿಂತನೆ ಮತ್ತು ಸಕರಾತ್ಮಕವಾದ ಪ್ರಗತಿಗೆ ದಾರಿಯಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾನುವಾರ ಸುರಭಿ ರಿ. ಬೈಂದೂರು ಇದರ ಬೆಳ್ಳಿಹಬ್ಬದ ಸಂಭ್ರಮದೊಂದಿಗೆ ಇಲ್ಲಿನ ಯಡ್ತರೆ ಜೆ.ಎನ್.ಆರ್ ಕಲಾಮಂದಿರದ ಹೊರಾಂಗಣ ವೇದಿಕೆಯಲ್ಲಿ ಆಯೋಜಿಸಲಾದ 8 ದಿನಗಳ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮುದ್ಯೋಡಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಉದ್ಯಮಿ ಇರ್ಷಾದ್ ಸಾಹೇಬ್ ನಾಗೂರು, ಉದ್ಯಮಿ ಬಿಂದುಮನೆ ಕೃಷ್ಣ ಮೊಗವೀರ, ಉದ್ಯಮಿ ಕೃಷ್ಣಯ್ಯ ಮತ್ತೋಡಿ, ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು.

ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಸ್ಕರ ಬಾಡ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಶ್ರೀಧರ ಆಚಾರ್ಯ ವಂದಿಸಿದರು.

Exit mobile version