ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಹಳೆ ವಿದ್ಯಾರ್ಥಿಗಳು ಶಾಲೆಯ ಪ್ರತಿಯೊಂದು ಆಗು ಹೋಗುಗಳಿಗೆ ಸ್ಪಂದಿಸಬೇಕು, ಶಾಲೆಯೊಂದಿಗೆ ಗಟ್ಟಿಯಾಗಿ ನಿಲ್ಲಬೇಕು. ಹಳೆ ವಿದ್ಯಾರ್ಥಿಗಳು ಶಾಲೆಯೊಂದಿಗೆ ಉತ್ತಮ ಒಡನಾಟ ಇಟ್ಟಕೊಂಡರೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆಧುನೀಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಬೇಕು ಎಂದು ಕೆನರಾ ಬ್ಯಾಂಕಿನ ನಿವೃತ್ತ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಭಾನುವಾರ ನಡೆದ ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 56ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ವ್ಯವಸ್ಥಾಪಕ ವಾಸು ದೇವಾಡಿಗ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮ ಮತ್ತು ವಿಶ್ವಾಸದಿಂದ ಸಾಧಿಸುವ ಛಲದೊಂದಿಗೆ ಉತ್ತಮ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸಾವಿತ್ರಿ ಎಸ್. ಶುಭಾಶಂಸನೆಗೈದರು. ಭಾರತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಇದೇ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ಜಿ. ವಿಶ್ವನಾಥ ಭಟ್, ನಿವೃತ್ತ ಶಿಕ್ಷಕ ಕೆ. ಮಹಾಬಲ ಆಚಾರ್ಯ, ಸಾಧಕ ವಿದ್ಯಾರ್ಥಿಗಳಾದ ಸುಶ್ಮಿತಾ ಎಸ್. ಗಾಣಿಗ, ಮನಾಲಿ ಎಂ., ಶ್ರಾವ್ಯ ಮತ್ತು ನಿಸರ್ಗ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಥುನ್ ದೇವಾಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ. ಸುದನೇಶ ಶ್ಯಾನುಭಾಗ್ ವರದಿ ವಾಚಿಸಿದರು. ಬಿ. ಪ್ರಕಾಶ ಶೆಣೈ, ಸಕು ಉದಯ, ಮಹಮ್ಮದ್ ಹುಸೇನ್, ಸೌಮ್ಯ ಗಾಣಿಗ, ಮಮತಾ ಪೂಜಾರಿ, ದೇವದಾಸ ಸಮ್ಮಾನಿತರನ್ನು ಪರಿಚಯಿಸಿದರು. ನಾಗರಾಜ ಕಲೈಕಾರ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬಿ. ರಾಘವೇಂದ್ರ ಪೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಭಾಸ್ಕರ ಎಚ್.ಜಿ. ವಂದಿಸಿದರು.