Kundapra.com ಕುಂದಾಪ್ರ ಡಾಟ್ ಕಾಂ

ಸೌಂದರ್ಯಪ್ರಜ್ಞೆಯುಳ್ಳ ವ್ಯಕ್ತಿಗಳು ದೇಶದ ಸಂಪತ್ತು: ಡಾ. ಎಂ ಮೋಹನ ಆಳ್ವ

ಕುಂದಾಪುರ: ನಮ್ಮ ದೇಶ, ಕಲೆ, ಸಂಸ್ಕೃತಿ, ಜೀವನ ಪದ್ಧತಿಯನ್ನು ಪ್ರೀತಿಸುವ ಸೌಂದರ್ಯ ಪ್ರಜ್ಞೆ ಇದ್ದವರು ದೇಶದ ದೊಡ್ಡ ಸಂಪತ್ತು. ನಾವು ಎಲ್ಲವನ್ನೂ ಗೌರವಿಸುವ ದೇಶದ ಆಸ್ತಿಯಾಗಬೇಕೇ ಹೊರತು ಅಪಾಯಕಾರಿ ವ್ಯಕ್ತಿಯಾಗಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.

ಅವರು ಕುಂದಾಪುರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಡಾ. ಸುಭೋದ್ ಕುಮಾರ್ ಮಲ್ಲಿ ಅವರ ‘ಸೃಜನಾ’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಮಾತನಾಡಿದರು. ಚಿತ್ರಕಲೆ ಸಮಾಜದ ಮೊತ್ತ ಮೊದಲ ಅಭಿವ್ಯಕ್ತಿ ಮಾಧ್ಯಮ. ಇದು ನೃತ್ಯ, ಬರಹ, ಹಾಡು ಎಲ್ಲಕ್ಕಿಂತಲೂ ಭಿನ್ನ. ಚಿತ್ರಕಲೆಯನ್ನು ನೋಡಿದರಷ್ಟೇ ಸಾಲದು ಅದರೊಳಗಿನ ಭಾವವನ್ನು ಕಾಣುವ ದೃಷ್ಟಿಯೂ ಬೇಕಾಗುತ್ತದೆ ಎಂದ ಅವರು, ದೇಶದ ಸಂಪನ್ಮೂಲಗಳ ಬಗ್ಗೆ ಮಾತನಾಡುವ ನಾವುಗಳು ನಮ್ಮೊಳಗಿನ ನಿಜವಾದ ಸಂಪನ್ಮೂಲದ ಬಗ್ಗೆ ತಿಳಿಯುವುದೇ ಇಲ್ಲ. ಏನನ್ನೋ ಕಲಿಯುತ್ತೇನೆ. ಇನ್ನೇನೋ ಆಗುತ್ತೇವೆ. ಇದು ಬದಲಾಗಬೇಕು. ಇಂದಿನ ಶಿಕ್ಷಣ ಜ್ಞಾನವನ್ನು ಕೊಡುತ್ತಿದೆಯೇ ಹೊರತು ಸುಂದರ ಮನಸ್ಸುಗಳನ್ನು ಕಟ್ಟಿಕೊಡುತ್ತಿಲ್ಲ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಅಂಜಲಿ ಶೆಟ್ಟಿ ಸ್ವಾಗತಿಸಿದರು. ಡಾ. ಕೆ.ಎಸ್. ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯ ಗಾವ್ಕರ್ ನಿರೂಪಿಸಿದರು.

Exit mobile version