Site icon Kundapra.com ಕುಂದಾಪ್ರ ಡಾಟ್ ಕಾಂ

ಸಹಕಾರ ಭಾರತಿ ಅಭ್ಯಾಸ ವರ್ಗ: ಜನರಿಗೆ ಹೆಚ್ಚು ಸಹಕಾರ ನೀಡುವುದೇ ಗುರಿಯಾಗಲಿ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಹಕಾರ ಕ್ಷೇತ್ರ ಪ್ರಬಲವಾಗಿ ಬೆಳೆದಿದ್ದು ವಾಣಿಜ್ಯ ಬ್ಯಾ೦ಕುಗಳಿಗಿ೦ತ ಸಹಕಾರ ವ್ಯವಸ್ಥೆ ಜನಸಾಮಾನ್ಯರಿಗೆ ಆಪ್ತವಾಗಿದೆ. ಗ್ರಾಮೀಣ ಜನರಿಗೆ ಸಹಕಾರ ಕ್ಷೇತ್ರದ ಮೂಲಕ ಸಹಾಯ ಮಾಡಲು ಸಾಧ್ಯವಿದೆ. ಹಾಗಾಗಿ ಸಹಕಾರ ಭಾರತಿ ಈ ಕ್ಷೇತ್ರ ಸದಾ ಕ್ರಿಯಾಶೀಲವಾಗಿದ್ದು, ಪ್ರಾಬಲ್ಯತೆ ಸಾಧಿಸಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಸಹಕಾರ ಭಾರತಿ, ಕು೦ದಾಪುರ ತಾಲೂಕು ವತಿಯಿಂದ ಇಲ್ಲಿನ ಮೊಗವೀರ ಭವನದಲ್ಲಿ ನಡೆದ ತಾಲೂಕು ಅಭ್ಯಾಸ ವರ್ಗ-2025 ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಭಾರತಿ ಇನ್ನಷ್ಟು ಪ್ರಬಲವಾಗಲು ನಮ್ಮ ಸಹಕಾರಿಗಳು ಪ್ರಯತ್ನಿಸಬೇಕು. ಸಹಕಾರ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಮಾತ್ರ ಸನ್ನದ್ಧರಾಗದೆ ಸದಾ ಚಟುವಟಿಕೆಯಿಂದ ಇರಬೇಕು. ನಮ್ಮ ಉದ್ದೇಶ ಜನರಿಗೆ ಹೆಚ್ಚು ಸಹಕಾರ ನೀಡುವುದು. ಸಹಕಾರ ವ್ಯವಸ್ಥೆಯ ಮೂಲಕ ಸಾರ್ವಜನಿಕರಿಗೆ ನೆರವಾಗೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ದಿನೇಶ ಹೆಗ್ಡೆ ಅತ್ರಾಡಿ ಮಾತನಾಡಿ, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ಸಹಕಾರ ಭಾರತಿಯಲ್ಲೂ ಅಭ್ಯಾಸ ವರ್ಗ ನಡೆಸಲಾಗುತ್ತಿದೆ. ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. 40ಕೋಟಿಗೂ ಹೆಚ್ಚು ಸಹಕಾರಿಗಳಿದ್ದಾರೆ. 653 ಜಿಲ್ಲೆಗಳಲ್ಲಿ ಸಹಕಾರ ಭಾರತಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ವ್ಯವಸ್ಥೆಯಲ್ಲಿ ಇನ್ನೂ ಮಹತ್ತರವಾದ ಬದಲಾವಣೆಗಳು ಆಗಬೇಕು. ಹಾಗಾಗಿ ವಿಷಯ ತಜ್ಞರ ಮೂಲಕ ಅಭ್ಯಾಸ ವರ್ಗ ನಡೆಸಲಾಗುತ್ತಿದೆ ಎಂದರು.

ಸಹಕಾರ ಭಾರತಿಯ ಕು೦ದಾಪುರ ತಾಲೂಕು ಅಧ್ಯಕ್ಷರಾದ ಸದಾನಂದ ಬಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಹಕಾರ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಹಕಾರಿಗಳು ಶ್ರಮಿಸುತ್ತಿದ್ದಾರೆ. ಅಭ್ಯಾಸ ವರ್ಗದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಸಹಕಾರ ಭಾರತಿ ತತ್ವ, ಸಿದ್ಧಾಂತ, ಸೇವಾ ಮನೋಭಾವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಕು೦ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾದ ಸದಾನಂದ ಬಳ್ಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬೇಳೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸುರೇಂದ್ರ ಕಾಂಚನ್ ಪ್ರಾರ್ಥನೆ ನೆರವೇರಿಸಿದರು.

ಸಹಕಾರ ಭಾರತಿ ಪರಿಚಯ ದ್ವೇಯೋದ್ದೇಶ ಸಹಕಾರಿ ಕಾಯಿದೆ ಹಾಗೂ ನಿರ್ದೇಶಕರ ಜವಬ್ದಾರಿ ಮತ್ತು ಕರ್ತವ್ಯದ ಬಗ್ಗೆ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯ ಎಸ್.ಕೆ ಮಂಜುನಾಥ ಗೋಷ್ಠಿ ನಡೆಸಿಕೊಟ್ಟರು.

ಕಾರ್ಯಕರ್ತ-ಕಾರ್ಯ ಪದ್ಧತಿ ಪಂಚ ಪರಿವರ್ತನೆ-ಸಂಘ ಶತಾಬ್ಬಿ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಗೋಷ್ಠಿ ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀಶ್ ನಾಯಕ್, ಸಹಕಾರಿ ಕ್ಷೇತ್ರದ ನಾಯಕರುಗಳು ಉಪಸ್ಥಿತರಿದ್ದರು.

Exit mobile version