Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರಥಬೀದಿಯ ನಾಲ್ಕು ಅಂಗಡಿಗಳಿಗೆ ಬೆಂಕಿ, ಕೋಟ್ಯಾಂತರ ರೂ. ನಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಮುಖ್ಯರಸ್ತೆಯ ರಥಬೀದಿಯಲ್ಲಿ ಸೋಮವಾರ ನಸುಕಿನ ಜಾವ ಭೀಕರ ಅಗ್ನಿ ಅವಘಡ ನಡೆದಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿ ದುರಂತದಲ್ಲಿ ಪಟಾಕಿ, ಪುಸ್ತಕದಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿ, ಆಯುರ್ವೇದ ವಸ್ತುಗಳ ಅಂಗಡಿ, ಎಲೆಕ್ಟ್ರಾನಿಕ್ಸ್ ಅಂಗಡಿ ಮೂರು ಅಂಗಡಿಗಳು ಸಂಪೂರ್ಣ ಧ್ವಂಸವಾದರೆ, ಮತ್ತೊಂದು ಪೂಜಾ ಸಾಮಗ್ರಿ ಅಂಗಡಿ ಅರ್ಧ ಧ್ವಂಸಗೊಂಡಿದೆ.

ಕುಂದಾಪುರದ ಪೇಟೆ ಶ್ರೀ ವೇಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ ರಥಬೀದಿಯಲ್ಲಿ ಪ್ರಸಿದ್ದ ಪುಸ್ತಕದಂಗಡಿ, ಆಯುರ್ವೇದ ವಸ್ತುಗಳ ಅಂಗಡಿ, ಪಟಾಕಿ ಅಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿ ಬೆಂಕಿಗಾಹುತಿಯಾಗಿದೆ. ಒಂದು ಅಂಗಡಿಯ ಮೇಲ್ಬಾಗದಲ್ಲಿ ಸೋಮವಾರ ನಸುಕಿನ ಜಾವ ಸುಮಾರ 3.30 ಗಂಟೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಗಮನಿಸಿದ ರಾತ್ರಿ ಕಾವಲುಗಾರ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಅಂಗಡಿ ಮಾಲಿಕರಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಅರ್ಧ ಘಂಟೆ ಸಮಯದಲ್ಲಿ ಅಂಗಡಿಗಳು ಬಹುತೇಕ ಹೊತ್ತಿ ಉರಿದಿವೆ.

ರಥಬೀದಿಯಲ್ಲಿದ್ದ ಲಲಿತ್ ನಾಥ್ ಭಟ್ ಮಾಲೀಕತ್ವದ ದಾಮೋದರ್‌ ಪ್ರಾವಿಜನ್ ಸ್ಟೋರ್ ಹೆಸರಿನ ಪೂಜಾ ಸಾಮಾಗ್ರಿಗಳ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಶಿವಾನಂದ ಭಟ್ ಸಹೋದರರು ನಡೆಸುತ್ತಿರುವ ಜನಾರ್ಧನ ಭಟ್ ಎಂಡ್ ಸನ್ಸ್ ಎಂಬ ಪಟಾಕಿ ಅಂಗಡಿ, ಪುಸ್ತಕದ ಅಂಗಡಿಯೂ ಸರ್ವನಾಶವಾಗಿದೆ. ದಿವಾಕರ ಭಟ್ ಮಾಲೀಕತ್ವದ ಮಥುರಾ ಎಲೆಕ್ಟ್ರಾನಿಕ್ಸ್ ಸುಟ್ಟು ಹೋಗಿದ್ದು, ನಷ್ಟ ಅಂದಾಜಿಗೆ ಸಿಕ್ಕಿಲ್ಲ. ಗಣಪತಿ ನಾಯಕ್ ಮಾಲೀಕತ್ವದ ಬಾಲಾಜಿ ಪ್ರಾವಿಜನ್ ಸ್ಟೋರ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪೂಜಾ ಸಾಮಾಗ್ರಿಗಳಿದ್ದು, ಮೇಲಿನ ಮಹಡಿ ಸಂಪೂರ್ಣ ಸುಟ್ಟು ಹೋಗಿದೆ.

ಕುಂದಾಪುರ, ಬೈಂದೂರು ಅಗ್ನಿಶಾಮಕ‌ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version