ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ಬೇರೆ ಬೇರೆ ಕಡೆಗಳಲ್ಲಿ ಇರುವ ಹಳೆಯ ವಿದ್ಯಾರ್ಥಿಗಳಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಳೆ ವಿದ್ಯಾರ್ಥಿಗಳು ವಿವಿಧ ಮೋಜಿನ ಆಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮಹೇಶ್ ಯಾದವ್, ವಂಶಿ, ಆಯುಷ್ ಶೆಟ್ಟಿ, ಶ್ರಾವಣಿ, ಹರ್ಷಿತ್ ಹಿರೇಮಠ, ಡಾ| ಉತ್ಸವ ಶೆಟ್ಟಿ ಈ ವಸತಿ ಶಾಲೆಯ ಮಕ್ಕಳಾದ ನಮಗೆ ಶಾಲೆಯು ಸರಿಯಾದ ಮಾರ್ಗದರ್ಶನ ನೀಡಿತ್ತು. ಅದೀಗ ನಮ್ಮ ಅನುಭವಕ್ಕೆ ಬರುತ್ತಿದೆ. ಶಿಸ್ತಿನ ವಿಷಯದಲ್ಲಿ ರಾಜಿ ಇಲ್ಲದ ವ್ಯವಹಾರ ನಮ್ಮ ಜೀವನದಲ್ಲಿ ಶಿಸ್ತನ್ನು ಅನುಸರಿಸುವಂತೆ ಮಾಡಿದೆ. ಪಠ್ಯೇತರ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹದಿಂದ ನಮ್ಮ ಸಾಧನೆಯ ಮಾರ್ಗಗಳು ತೆರೆದುಕೊಂಡಿವೆ. ಶುಚಿ ರುಚಿಯಾದ ಆಹಾರ ವ್ಯವಸ್ಥೆ ನಮಗೆ ಇಲ್ಲಿ ಸಿಕ್ಕಂತೆ ಉಳಿದ ಕಡೆಗಳಲ್ಲಿ ಲಭಿಸಿಲ್ಲ. ಇದೇ ಮೊದಲಾದ ಅನುಭವಗಳನ್ನು ಹಂಚಿಕೊಂಡರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಗಳ ಜೊತೆ ತಮ್ಮ ಸಂತಸವನ್ನು ಹಂಚಿಕೊಂಡರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ- ಶಿಕ್ಷಕೇತರ ವೃಂದದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೋಜಿನ ಆಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ಶಿಕ್ಷಣ ಸಂಯೋಜಕರಾದ ಲತಾ ದೇವಾಡಿಗ ಕಾರ್ಯಕ್ರಮವನ್ನು ನಿರ್ವಹಿಸಿದರು.

