Kundapra.com ಕುಂದಾಪ್ರ ಡಾಟ್ ಕಾಂ

ಪ್ರಶಸ್ತಿ ವಾಪಾಸು ಮಾಡುವ ಪ್ರಚಾರ ಪ್ರೀಯರಿಗೆ ಅಹಿಷ್ಟುತೆ ನೆಪ: ಶ್ರೀ ಸಂತೋಷ ಗುರೂಜಿ

ಗಂಗೊಳ್ಳಿ: ಬೇರೆ ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಹಿಂದುಗಳಲ್ಲಿ ಧರ್ಮದ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ. ನಮ್ಮ ದೇಶದ ನೆಲ, ಜಲ, ಕುಲಕ್ಕೆ ನಾವು ಏನು ಮಾಡಿದ್ದೇವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮವನ್ನು ಒಡೆಯುವ, ಹಿಂದು ಧರ್ಮ ಗುರುಗಳನ್ನು ಅತಂತ್ರಗೊಳಿಸುವ ಹುನ್ನಾರ ಕುತಂತ್ರ ನಡೆಯುತ್ತಿದೆ. ಆ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ಒಡೆದು ದೇಶದಲ್ಲಿ ಅಶಾಂತಿ ಅಜಾಗರೂಕತೆ ಸೃಷ್ಟಿಸುವ ಅಸಹಿಷ್ಣುತೆ ಹೆಸರಿನಲ್ಲಿ ಗೊಂದಲ ಮೂಡಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ ಹೇಳಿದರು.

ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಸುಮಾರು 15 ಲಕ್ಷ ರೂ. ವೆಚ್ಚದ ನೂತನ ಪುಷ್ಪರಥವನ್ನು ಶ್ರೀದೇವರಿಗೆ ಸಮರ್ಪಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ನಾವು ಜಾತಿ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ, ನಮ್ಮಲ್ಲಿ ಸರಿಸಮಾನತೆ ಬೆಳೆದಾಗ ಮಾತ್ರ ನಮ್ಮ ದೇಶ ಒಂದಾಗಲು ಸಾಧ್ಯ. ನಮ್ಮ ದೇಶದಲ್ಲಿನ ಆಂತರಿಕ ಗೊಂದಲಗಳು, ದೇಶದ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಒಂದು ಸವಾಲಾಗಿದೆ. ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಇನ್ನೂ ಪರಿಹಾರ ದೊರೆಯದಿರುವ ಈ ದಿನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ನಡೆಸಿ, ಆ ಬಳಿಕ ನಡೆದ ಗಲಭೆಗಳು ಕಿತ್ತಾಟಗಳಿಂದ ಯಾವ ಸಾರ್ಥಕತೆಯೂ ಆಗಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಿಂದ ರಾಷ್ಟ್ರ ಹಾಗೂ ರಾಜ್ಯಕ್ಕೆ ಆಗಿರುವ ಲಾಭ ಏನು ಎಂದು ಪ್ರಶ್ನಿಸಿದ ಅವರು, ಕೊಡಗಿನಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಯಲ್ಲಿ ಹೊರ ರಾಜ್ಯದಿಂದ ಶಸ್ತ್ರಸಜ್ಜಿತ ಜನರನ್ನು ಕರೆತಂಡು ಗಲಭೆ ನಡೆಸಿ ಹಿಂದುಗಳನ್ನು ಕೊಲ್ಲುವ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ನಮ್ಮ ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಗಳನ್ನು ಕೊಲ್ಲುವ ಪ್ರಯತ್ನ ನಡೆಯುವುದಾದರೆ ಮುಂದಿನ ದಿನಗಳು ಮತ್ತಷ್ಟು ಗಂಭೀರವಾಗಿರಲಿದೆ ಎಂದು ಅವರು ಎಚ್ಚರಿಸಿದರು.

ಅಸಹಿಷ್ಣುತೆ ಹೆಸರಿನಲ್ಲಿ ಅನೇಕರು ತಮಗೆ ನೀಡಿದ ಪ್ರಶಸ್ತಿಗಳನ್ನು ವಾಪಾಸು ನೀಡುತ್ತಿರುವುದನ್ನು ಲೇವಡಿ ಮಾಡಿದ ಅವರು, ಕೇವಲ ಪ್ರಚಾರಕ್ಕಾಗಿ ಮಾತ್ರ ಪ್ರಶಸ್ತಿಗಳನ್ನು ವಾಪಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ಜೊತೆಗೆ ನೀಡಿದ ಸೈಟು ಹಾಗೂ ಹಣವನ್ನು ಈವರೆಗೆ ಯಾರೂ ವಾಪಾಸು ಮಾಡಿಲ್ಲ. ಹೀಗಾಗಿ ಪ್ರಶಸ್ತಿ ವಾಪಾಸು ಹಿಂದಿರುವ ಉದ್ದೇಶ ಸ್ಪಷ್ಟವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕರಸೇವೆಗಾಗಿ ರೈಲಿನಲ್ಲಿ ಹೋಗುತ್ತಿದ್ದ ಕರಸೇವಕರನ್ನು ಬೆಂಕಿ ಹಚ್ಚಿ ಕೊಂದಾಗ, ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟಾಗ, ಉತ್ತರಪ್ರದೇಶದಲ್ಲಿ ಒಂದೇ ಮನೆಯವರನ್ನು ನೇಣು ಹಾಕಿಸಿ ಸಾಯಿಸಿದಾಗ ಅಸಹಿಷ್ಣುತೆ ಇರಲಿಲ್ಲವೇ ಎಂದು ಪ್ರಶ್ನಿಸಿದ ಶ್ರೀಗಳು, ರಾಜಕೀಯ ಲಾಭಕ್ಕಾಗಿ ದೇಶವನ್ನು ಅಡ ಇಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಮೂಡನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವುದು ಸ್ವಾಗತಾರ್ಹ. ಮೂಡನಂಬಿಕೆ ಹೆಸರಿನಲ್ಲಿ ಹಿಂದು ಧರ್ಮ ಮತ್ತು ಬ್ರಾಹ್ಮಣರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಮೂಡನಂಬಿಕೆ ಹೆಸರಿನಲ್ಲಿ ಹಿಂದುತ್ವವನ್ನು ಅಲುಗಾಡಿಸುವ ಕೆಲಸ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರ ಸುಳ್ಳಲ್ಲ. ಆದರೆ ಕೆಲವು ಜ್ಯೋತಿಷಿಗಳಿಂದ ಹಿಂದು ಸಮಾಜದಲ್ಲಿ ಅನ್ಯಾಯ ನಡೆಯುತ್ತಿದೆ. ಹೀಗಾಗಿ ಸರಕಾರ ಕಾಯ್ದೆ ಜಾರಿಗೊಳಿಸುವ ಸಂದರ್ಭ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಆಚರಣೆಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ಹಿಂದುತ್ವ, ನಮ್ಮ ಧರ್ಮದ ರಕ್ಷಣೆಗೆ ಎಲ್ಲರೂ ಸಿದ್ಧರಾಗಬೇಕು ಎಂದು ಹೇಳಿದ ಅವರು ಗಂಗೊಳ್ಳಿಯಲ್ಲಿ ಹಿಂದುತ್ವ ಪ್ರಬಲವಾಗಿ ಬೇರೂರಿದೆ. ಇದನ್ನು ಅಲುಗಾಡಿಸುವ ಪ್ರಯತ್ನ ನಡೆದರೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬಂತೆ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಮುಂಬೈನ ಉದ್ಯಮಿ ಹೊಸ್ಮನೆ ದೇವರಾಯ ಶೇರುಗಾರ್ ಶುಭಾಶಂಸನೆಗೈದರು. ಇದೇ ಸಂದರ್ಭ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಗೋವಾದ ಉದ್ಯಮಿ ಪ್ರಕಾಶ ಪೂಜಾರಿ, ಮತ್ಸ್ಯೋದ್ಯಮಿ ಪೊಕ್ಕೆ ನಾಗೇಶ ಖಾರ್ವಿ, ಗಂಗೊಳ್ಳಿಯ ಉದ್ಯಮಿ ಗೋಪಾಲ ಗಾಣಿಗ, ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ. ಲಕ್ಷ್ಮೀನಾರಾಯಣ ಭಟ್, ಸಮಿತಿಯ ಅಧ್ಯಕ್ಷ ಅಶೋಕ ಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಂದ್ರ ಎಸ್.ಗಂಗೊಳ್ಳಿ ಮತ್ತು ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಎಸ್‌ಆರ್‌ಜಿ ವಂದಿಸಿದರು.

Exit mobile version