ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಿಷಿಕಾ ಆರ್. ದೇವಾಡಿಗ ಅವರಿಗೆ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ “ವಿದ್ಯಾರ್ಥಿ ಯುವ ಸಾಹಿತ್ಯ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 21ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಟ್ಟೆ ನಿರ್ದೇಶಕರಾದ ಯೋಗೇಶ್ ಹೆಗಡೆ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿ, “ರಿಷಿಕಾ ಅವರ ಭವಿಷ್ಯ ಜೀವನ ಉಜ್ವಲವಾಗಲಿ. ಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ” ಎಂದು ಹಾರೈಸಿದರು.

ಸಮಾರಂಭದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಸಿದ್ದಾಪುರ ವಸುದೇವ ಭಟ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಕೊಂಡಳ್ಳಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರುಗಳು, ಶಿಕ್ಷಕಿ ರೂಪಾ ದೇವಾಡಿಗ ಹಾಗೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ನಾಡಿನ ಖ್ಯಾತ ಸಾಹಿತಿ, ‘ಚುಟುಕು ಬ್ರಹ್ಮನಂದೇ ಖ್ಯಾತಿ ಪಡೆದ’ ಹೆಚ್ ದುಂಡಿರಾಜ್ ಅವರು ಮಾತನಾಡಿ, ರಿಷಿಕಾ ಬರೆದ ಮೊದಲ ಪುಸ್ತಕ ‘ಮೊದಲ ಹೆಜ್ಜೆ’ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ, “ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟಿರುವುದು ಅಪರೂಪದ ಸಾಧನೆ” ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು, ಕನ್ನಡ ಸಾಹಿತ್ಯಾಸಕ್ತರು, ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು ಹಾಗೂ ವಿದ್ಯಾರ್ಥಿ ಸಾಹಿತಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದರು.