Kundapra.com ಕುಂದಾಪ್ರ ಡಾಟ್ ಕಾಂ

ಬಡ್ಡಿ ದಂಧೆ: ಸಾಲ ತೀರಿದ ಮೇಲೂ ಹಣಕ್ಕೆ ಬೇಡಿಕೆ, ಪ್ರಕರಣ ದಾಖಲು

ಬೈಂದೂರು: ಕರಾವಳಿಯಾದ್ಯಂತ ನಿರಂತರವಾಗಿ ನಡೆಯುತ್ತಿರುವ ಬಡ್ಡಿ ದಂಧೆಗೆ ಹಲವಾರು ಕುಟುಂಬಗಳು ಬಲಿಯಾಗುತ್ತಲೇ ಇವೆ. ತಮಗೇ ಗೊತ್ತಿಲ್ಲದಂತೆ ಹಲವು ಬಡ ಕುಟುಂಬಗಳು ಬಡ್ಡಿ ದಂಧೆಯಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಬೆನ್ನಿಗೇ ಯಡ್ತರೆ ಗ್ರಾಪಂ ವ್ಯಾಪ್ತಿಯ ಆಲಂದೂರು ಎಂಬಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಸಾಲ ಮತ್ತು ಬಡ್ಡಿ ತೀರಿದರೂ ಮತ್ತೆ ಒಂದು ಲಕ್ಷ ರೂಪಾಯಿ ಕೊಡುವಂತೆ ಕಿರುಕುಳ ನೀಡುತ್ತಿದ್ದ ಆರೋಪಿ ಆಲಂದೂರು ನಿವಾಸಿ ಅನಂತ ಕೊಠಾರಿ ಯಾನೆ ಅಂತ ಕೊಠಾರಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ಸಮಯದ ಹಿಂದೆ ಯಡ್ತೆರೆ ಗ್ರಾಮದ ಆಲಂದೂರು ನಿವಾಸಿ ಪ್ರಕರಣದ ಆರೋಪಿ ಅಂತ ಕೊಠಾರಿ ಎಂಬಾತ ಅಲ್ಲೇ ಮನೆ ಸಮೀಪದ ಮಾಚ ಪೂಜಾರಿ ಎಂಬುವರಿಗೆ ಒಂದು ಲಕ್ಷ ರೂಪಾಯಿ ಸಾಲವನ್ನು ಬಡ್ಡಿಗೆ ನೀಡಿದ್ದರು. ಅದರ ಜೊತೆಗೆ ಕೊಟ್ಟ ಸಾಲಕ್ಕೆ ಜಾಮೀನು ಎಂಬಂತೆ ಕರ್ನಾಟಕ ಬ್ಯಾಂಕಿನ ಶಿರೂರು ಶಾಖೆಯ ಖಾಲಿ ಚೆಕ್ಕನ್ನು ಪಡೆದುಕೊಂಡಿದ್ದರು. ಬಡ್ಡಿಗೆ ಹಣ ಪಡೆದಿದ್ದ ಮಾಚ ಪೂಜಾರಿ ಸಾಲದ ಬಾಬ್ತು ಒಂದು ಲಕ್ಷ ಹಾಗೂ ಬಡ್ಡಿಯ ಮೊತ್ತ ಐದು ಸಾವಿರ ಸೇರಿದಂತೆ ಒಟ್ಟು ಒಂದು ಲಕ್ಷದ ಐದು ಸಾವಿರ ರೂಪಾಯಿಗಳನ್ನು ಹಿಂತಿರುಗಿಸಿದ್ದರು ಎನ್ನಲಾಗಿದ್ದು, ಆದರೆ ಖಾಲಿ ಚೆಕ್ಕನ್ನು ಆರೋಪಿ ಅಂತ ಕೊಠಾರಿ ಹಿಂತಿರುಗಿಸಿರಲಿಲ್ಲ ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ)

ಖಾಲಿ ಚೆಕ್ ನೀಡುವಂತೆ ಮಾಚ ಪೂಜಾರಿ ಹಲವು ಬಾರಿ ಕೇಳಿದ್ದರೂ ಸತಾಯಿಸಿದ್ದ ಆರೋಪಿ ಅಂತ ಕೊಠಾರಿ ನವೆಂಬರ್ ೧೮ರಂದು ಒಂದು ಲಕ್ಷ ರೂಪಾಯಿ ಮೌಲ್ಯ ನಮೂದಿಸಿ ಬ್ಯಾಂಕಿಗೆ ಹಾಕಿದ್ದು ಖಾತೆದಾರನ ಖಾತೆಯಲ್ಲಿ ಹಣ ಇಲ್ಲ ಎನ್ನುವ ಉತ್ತರ ಬ್ಯಾಂಕಿನಿಂದ ಲಭಿಸಿದ್ದು, ಚೆಕ್ ಬೌನ್ಸ್ ಪ್ರಕರಣವನ್ನು ಮುಂದಿಟ್ಟುಕೊಂಡ ಆರೋಪಿ ಮತ್ತೆ ಮಾಚ ಪೂಜಾರಿಗೆ ಕಿರುಕುಳ ನೀಡಿದ್ದಲ್ಲದೇ ಇದಕ್ಕೆ ಒಪ್ಪದಿದ್ದಾಗ ವಕೀಲರ ಮೂಲಕ ಆರೋಪಿ ಪಿರ್ಯಾದಿಗೆ ನೋಟೀಸು ಕಳಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version