ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಯಾವುದೇ ವೃತ್ತಿಯಾದರೂ ಅದರ ಬಗ್ಗೆ ಗೌರವ ಇರಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು. ಪರಿಸರ ರಕ್ಷಣೆ ಮುಖ್ಯವಾಗಿದ್ದು, ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಮಹತ್ಕಾರ್ಯದಲ್ಲಿ ಮಕ್ಕಳು ಕೈಜೋಡಿಸಿದರೆ ದೇಶ ಉದ್ಧಾರವಾಗಲು ಸಾಧ್ಯ ಎಂದು ರೋಟರಿ ಡಿಸ್ಟ್ರಿಕ್ ಚೇರ್ಮನ್ ವೊಕೇಶನಲ್ ಸರ್ವಿಸ್ ಪ್ರಭಾಕರ ಕುಂಭಾಶಿ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಶಾಲೆಯ ದಿ. ಕೊಂಚಾಡಿ ಗಣಪತಿ ಶೆಣೈ ವೇದಿಕೆಯಲ್ಲಿ ಜರಗಿದ ಪರಿಸರ ಹಾಗೂ ಕಡಲಾಮೆ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಸರಕಾರಿ ಶಾಲೆ ಎಂಬ ಕೀಳರಿಮೆ ಇರಬಾರದು. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಮಾಜದ ಕಟ್ಟ ಕಡೆಯ ಸಹಸ್ರಾರು ಮಂದಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಶುಚಿತ್ವ, ಪಾಠೇತರ ಚಟುವಟಿಕೆಗಳಿಗೆ ಪ್ರೋತ್ಸಾಹ, ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೊಂದು ಉತ್ತಮ ನಿದರ್ಶನ ಎಂದು ಅವರು ಶ್ಲಾಘಿಸಿದರು.
ರೋಟರಿ ವಲಯ-1ರ ಅಸಿಸ್ಟೆಂಟ್ ಗವರ್ನರ್ ಐ. ನಾರಾಯಣ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ನಾಗರಾಜ್ ಖಾರ್ವಿ ಮಾಹಿತಿ ನೀಡಿದರು.
ಇದೇ ಸಂದರ್ಭ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಜೀವನಾಧಾರಿತ ವೃತ್ತಿ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಅಶೋಕ ಭಂಡಾರಿ ತ್ರಾಸಿ, ಶಂಕರ ಪೂಜಾರಿ ಗಂಗೊಳ್ಳಿ, ಅನಿಲ್ ಹೆಮ್ಮಾಡಿ ಮತ್ತು ಖಲೀಫೆ ಅಬ್ದುಲ್ ಮಜೀದ್ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ, ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಉಷಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಕೃಷ್ಣ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಶಿಕ್ಷಕಿ ಅನುಷಾ ಸಿ. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕಾರ್ಯದರ್ಶಿ ರಾಮನಾಥ ಚಿತ್ತಾಲ್ ವಂದಿಸಿದರು.