Site icon Kundapra.com ಕುಂದಾಪ್ರ ಡಾಟ್ ಕಾಂ

ಅಪಘಾತದಲ್ಲಿ ಗಂಭೀರ ಗಾಯಗೊಂಡ 3 ವರ್ಷದ ಮಗು. ತುರ್ತು ಸ್ಪಂದನೆಯೊಂದಿಗೆ ಮಾನವೀಯತೆ ಮೆರೆದ ಪೊಲೀಸರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಾರು-ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಗುವನ್ನು ಪೊಲೀಸ್ ವಾಹನದಲ್ಲಿ ತುರ್ತಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಪೊಲೀಸ್‌ ಸಿಬ್ಬಂದಿಗಳು ಮಾನವಿಯತೆ ಮೆರೆದಿದ್ದಾರೆ.  ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆಯ ಜಾಡಿ ಎಂಬಲ್ಲಿ ಬುಧವಾರ ಮಧ್ಯಾಹ್ನ ಅಪಘಾತದ ಸಂದರ್ಭ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಇಲಾಖೆಯ ಹೈವೇ ಪಟ್ರೋಲ್ ವಾಹನದ ಚಾಲಕ ರಾಮ ಹಾಗೂ ಸಿಬ್ಬಂದಿ ಕಿರಣ್ ಬಿ. ಪಾಟೀಲ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ನೆಂಪು ಕಡೆಯಿಂದ ಕುಂದಾಪುರ ಕಡೆಗೆ ರಾಘವೇಂದ್ರ – ನಾಗವೇಣಿ ದಂಪತಿಗಳು ತಮ್ಮ ಮಗುವಿನೊಂದಿಗೆ ತೆರಳುತ್ತಿದ್ದ ಬೈಕಿಗೆ ಹೆಮ್ಮಾಡಿ ಕಡೆಯಿಂದ ಕೊಲ್ಲೂರು ಕಡೆಗೆ ತೆರಳುತ್ತಿದ್ದ ಕಾರು ಜಾಡಿ ಎಂಬಲ್ಲಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್‌ ಸವಾರ ರಾಘವೆಂದ್ರ ಅವರ ಬಲ ಕಾಲಿಗೆ ರಕ್ತ ಗಾಯವಾಗಿದ್ದು ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ನಾಗರತ್ನ ರವರಿಗೆ ಕೈ ಕಾಲು ಹಾಗೂ ದೇಹದಲ್ಲಿ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ ಹಾಗೂ ದರ್ಶಿತ್‌ ರವರಿಗೆ ಬಲ ಕಣ್ಣು ಮುಖಕ್ಕೆ ಹಾಗೂ ತಲೆಯ ಬಲ ಭಾಗಕ್ಕೆ ರಕ್ತ ಗಾಯವಾಗಿದೆ.

ಸಮೀಪದಲ್ಲೇ ಗಸ್ತಿನಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಬೈಕ್‌ನಿಂದ ಬಿದ್ದವರನ್ನು ಪ್ರಾಥಮಿಕವಾಗಿ ಉಪಚರಿಸಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಮಗು ದರ್ಶಿತ್‌ನನ್ನು ಇಲಾಖಾ ವಾಹನದಲ್ಲಿ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದಂಪತಿಯನ್ನು ಸ್ಥಳೀಯ ವಾಹನದವರು ಆಸ್ಪತ್ರೆಗೆ ಕರೆದೊಯ್ದಿದ್ದು ಮೂವರಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.

ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version