Kundapra.com ಕುಂದಾಪ್ರ ಡಾಟ್ ಕಾಂ

ವೈಯಕ್ತಿಕ ಆರೋಪ ಮಾಡುವುದು ಬಿಡಿ. ವಿಷಯಾಧಾರಿತ ಚರ್ಚೆಗೆ ನಾನು ರೆಡಿ: ಜಯಪ್ರಕಾಶ್ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಕಾಂಗ್ರೆಸ್ಸಿನ ಸಭೆಗಳಲ್ಲಿ ತಾನು ಸ್ವತಂತ್ರವಾಗಿ ಸ್ವರ್ಧಿಸಿರುವುದೇ ದೊಡ್ಡ ಪ್ರಮಾದ ಎಂಬಂತೆ ತನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಹೀಗೆ ನಿರಾಧಾರವಾಗಿ ಆರೋಪಿಸುವ ಬದಲು ತನ್ನೊಂದಿಗೆ ಬಹಿರಂಗವಾಗಿ ವಿಷಯಾಧಾರಿತ ಚರ್ಚೆಗೆ ಬನ್ನಿ ಎಂದು ವಿಧಾನ ಪರಿಷತ್ ಸ್ವತಂತ್ರ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದರು.

ಹೆಮ್ಮಾಡಿ ಜೂವೆಲ್ ಪಾರ್ಕ್‌ನಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಬೇರೆ ಪಕ್ಷದಿಂದ ಬಂದವರು ಎಂದು ಆರೋಪಿಸುವ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಮಾಜಿ ಶಾಸಕ ಯು.ಆರ್.ಸಭಾಪತಿ ಮೂಲ ಕಾಂಗ್ರೆಸಿಗರಾ? ಅವರೂ ಕೂಡ ಬೇರೆ ಬೇರೆ ಪಕ್ಷದಿಂದ ಕಾಂಗ್ರಸ್‌ಗೆ ಬಂದವರಲ್ಲವೇ ಎಂದು ಪ್ರಶ್ನಿಸಿದರು.

ಅಧಿಕಾರ ದಾಹ ಯಾರಿಗೆ?
ಜೆಪಿ ಹೆಗ್ಡೆಗೆ ಅಧಿಕಾರದಾಹ ಎಂದು ಗೂಬೆ ಕೂರಿಸಿವ ಕಾಂಗ್ರೆಸ್ಸಿಗರಿಗೆ ತಾನು ಎರಡು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸರಕಾರ ನಿಲುವು ಸರಿಕಾಣದಿದ್ದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಕುಮಾರ ಸ್ವಾಮಿ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುತ್ತೇನೆ ಬನ್ನಿ ಎಂದು ಕರೆದಿದ್ದರೂ, ಅವರ ಆಹ್ವಾನ ಸ್ವೀಕರಸಲಿಲ್ಲ. ಅಧಿಕಾರಿ ದಾಹ ಇದ್ದವರು ಹೀಗೆ ಮಾಡಲು ಸಾಧ್ಯವೇ ಎಂದ ಅವರು, ಅಧಿಕಾರ ದಾಹ ಇರುವುದು ಎರಡು ಬಾರಿ ವಿಧಾನ ಪರಿಷತ್ ಪ್ರವೇಶಿಸಿ, ಮುಂದೆ ಸ್ಪರ್ಧಿಸುವುದಿಲ್ಲ ಎಂದವರು ಅರ್ಜಿಹಾಕದೆ ಮತ್ತೆ ಸ್ಪರ್ಧಿಸುತ್ತಿರುವವರಿಗೆ ಎಂದು ಕುಹಕವಾಡಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ತನ್ನನು ಕಾಂಗ್ರೆಸಿಗೆ ಬರಮಾಡಿಕೊಂಡು ಕುಂದಾಪುರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸದರು. ನಾನು ಸ್ಪರ್ಧಿಸಿದ್ದರಿಂದ ಕುಂದಾಪುರದಲ್ಲಿ ಸ್ಪರ್ಧೆಯಾದರೂ ನಡೆಯಿತು ಎಂದ ಅವರು ಗೆದ್ದಾಗಲೂ, ಸೋತಾಗಲೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡರು.
ತನ್ನ ಕೆಲಸವನ್ನು ಜನತೆ ಮರೆತಿಲ್ಲ

ಜಯಪ್ರಕಾಶ್ ಹೆಗ್ಡೆ ಏನು ಮಾಡಿದ್ದಾರೆ ಎಂದು ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನೀಲಾವರ ಹೊಳೆಗೆ ಕಿಂಡಿ ಆಣೆಕಟ್ಟು, ಸೇರಿದಂತೆ, ಜಿಲ್ಲೆಯ ಮೀನುಗಾರಿಕಾ ರಸ್ತೆ ಅಭಿವೃದ್ಧಿ, ಅಡಿಕೆ ಬೆಳಗಾರರ ಸಮಸ್ಯೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಮೊದಲು ದ್ವನಿ ಎತ್ತಿದ್ದೇ ನಾನು. ಗಂಗೊಳ್ಳಿ ಬಂದರು ಬ್ರೇಕ್ ವಾಟರ್ ಕಾಮಗಾರಿಗೆ ಕೇಂದ್ರದಿಂದ ಮೀನುಗಾರಿಕಾ ನಿಯೋಗದೊಟ್ಟಿಗೆ ತೆರಳಿ 102 ಕೋಟಿ ಮಂಜೂರು ಮಾಡಿಕೊಂಡು ಬಂದಿರುವುದು, ನಾನು ಸಚಿವನಾಗಿದ್ದ ಕಾಲದಲ್ಲೇ ಉಡುಪಿ ಜಿಲ್ಲಾ ಕೇಂದ್ರವಾಗಿ ಮಾರ್ಪಾಡಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವುದು ಬೈಂದೂರು, ಬ್ರಹ್ಮಾವರಕ್ಕೆ ವಿಶೇಷ ತಹಸೀಲ್ದಾರ್ ಕಛೇರಿ ಆದುದ್ದು. ಇದ್ಯಾವುದನ್ನೂ ಜನತೆ ಮರೆತಿಲ್ಲ ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ವಾರಾಹಿ ಕಾಮಗಾರಿ ತನಿಕೆಯಾಗಲಿ
ವಾರಾಹಿ ಯೋಜನೆ ಸಂರ್ಪೂಣ ಕಾಮಗಾರಿ ತನಿಖೆಯಾಗಬೇಕು ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದು ತನಿಕೆಯಾಗಬೇಕು ಎಂದು ಒತ್ತಾಯಿಸಿದ ಅವರು, ವಾರಾಹಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದರಿಂದ ಕಾಮಗಾರಿ ಮುಗಿಯಿತೇ ಹೊರತು ಪ್ರತಿಭಟನೆಯಿಂದಲ್ಲ. ಅದೇ ಕ್ಷೇತ್ರದಲ್ಲಿ 30 ವರ್ಷಗಳ ಶಾಸಕರಾಗಿದ್ದವರು ಹೋರಾಟ ಮಾಡಿದ್ದು ಹಾಸ್ಯಸ್ಪದ ಎಂದರು.

ಗೆದ್ದರೂ ಸೋತರೂ ಜನರೊಂದಿಗಿರುವೆ.
ಶಾಸಕ ಮತ್ತು ಸಂಸದನಾಗಿ ಆಯ್ಕೆ ಆಗಿದ್ದರೂ, ಬೈಂದೂರು ಭಾಗದ ಜನರಿಗೆ ನನಗೆ ಮತದಾನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಇಂತಹ ಅವಕಾಶ ಜನರಿಗೆ ಸಿಕ್ಕಿದ್ದು, ಸ್ಥಳೀಯ ಸಮಸ್ಯೆ ಸ್ಪಂದಿಸಿ, ಸೋತರೂ, ಗೆದ್ದರೂ ಜನರೊಟ್ಟಿಗೆ ಇರುತ್ತೇನೆ. ಸಂಸತ್‌ನಲ್ಲಿ ಅತೀ ಹೆಚ್ಚು ಪ್ರಶ್ನೆ ಕೇಳುವುದು ಮುಖ್ಯವಲ್ಲ. ಎಷ್ಟು ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಂಡೆ ಎನ್ನೋದು ಮುಖ್ಯವಾಗುತ್ತದೆ. ಅಂತಹ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಾಣಿ ಗೋಪಾಲ, ಆವರ್ಸೆ ವಿಜಯ ಶೆಟ್ಟಿ, ಯುವ ಕಾಂಗ್ರೆಸ್ ಪ್ರಥ್ವಿರಾಜ್ ಶೆಟ್ಟ, ದೀಪಕ್ ಕುಮಾರ್ ನಾವುಂದ ಇದ್ದರು.

ಇದನ್ನೂ ಓದಿ

ಸಂದರ್ಶನ: ತಾನು ಕಾರ್ಯಕರ್ತರ ಅಭ್ಯರ್ಥಿ. ಕಾರ್ಯಕರ್ತರೊಂದಿಗಿನ ನಿರಂತರ ಸಂಪರ್ಕ ತನಗೆ ಜಯ ತಂದುಕೊಡಲಿದೆ – ಜಯಪ್ರಕಾಶ್ ಹೆಗ್ಡೆ http://kundapraa.com/?p=9464 

Exit mobile version