Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ: ಬಹುಮಾನ ವಿತರಣಾ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ (ಪ್ರಾಥಮಿಕ ಶಾಲಾ ವಿಭಾಗ) ಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಈ ಸಮಾರಂಭಕ್ಕೆ ಗೌರವಾನ್ವಿತ ಅತಿಥಿಗಳಾಗಿ ಡಾ. ಉದಯಕುಮಾರ್ ತಲ್ಲೂರು (ಸಾಮಾಜಿಕ ನ್ಯಾಯ ಸಮಿತಿ ಹಾಗೂ ಆಹಾರ ಸಮಿತಿಯ  ಅಧ್ಯಕ್ಷರು, ಗ್ರಾಮಪಂಚಾಯತ್  ತಲ್ಲೂರು) ಹಾಗೂ  ಡಾ. ಎಂ. ದಿನೇಶ್ ಹೆಗ್ಡೆ (ನಿವೃತ್ತ ಪ್ರಾಂಶುಪಾಲರು, ಶ್ರೀ ಶಾರದಾ  ಕಾಲೇಜು, ಬಸ್ರೂರು) ಅವರು ಆಗಮಿಸಿದ್ದರು.

ಡಾ. ಉದಯಕುಮಾರ್ ತಲ್ಲೂರು ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಇಂದು ಮನೆ ಹಾಗೂ ಶಾಲೆಯಲ್ಲಿ ಲಭ್ಯವಿರುವ ಸೌಕರ್ಯಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಲು ಹೇಳಿದರು. ಮಾದಕವಸ್ತುಗಳು, ಟಿವಿ ಹಾಗೂ ಮೊಬೈಲ್ ಪೋನ್ಗಳ ಆಕರ್ಷಣೆಯಿಂದ ದೂರವಿದ್ದು, ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡುತ್ತಾ, ಚಟುವಟಿಕೆಯಿಂದ ಕೂಡಿದ ಆರೋಗ್ಯಕರ ಹಾಗೂ ಉತ್ತಮ ಜೀವನಶೈಲಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ  ಡಾ. ಎಂ. ದಿನೇಶ್ ಹೆಗ್ಡೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮನುಷ್ಯರು ವಿದ್ಯಾವಂತರಾಗಿ, ಬದುಕಿನಲ್ಲಿ ಏನು ಬೇಕು ಮತ್ತು ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಅರಿವನ್ನು ಹೊಂದಿರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಶಿಕ್ಷಕರು ಹೇಳಿದ ಪಾಠಗಳಿಗೆ ಮಾತ್ರ ಸೀಮಿತವಾಗದೆ, ತಮ್ಮ ಜೀವನದಲ್ಲಿ ಹೊಸ ವಿಚಾರಗಳನ್ನು ಕಲಿಯಲು ಹಾಗೂ ಸಂಶೋಧಿಸಲು ಸದಾ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಶಾಲೆಯಲ್ಲಿ ಅಮೂಲ್ಯ ಶಿಕ್ಷಣವನ್ನು ಪಡೆಯುತ್ತಿರುವ ಈ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಸಮಾಜಕ್ಕೆ ಮಾದರಿಯಾಗಲಿ ಹಾಗೂ ಶಾಲೆಯು ಇನ್ನಷ್ಟು ಅಭಿವೃದ್ಧಿ ಹೊಂದಿ, ಈ ಸಂಸ್ಥೆಯಿಂದ ದೇಶಕ್ಕೆ ಉತ್ತಮ ನಾಯಕರು ಲಭಿಸಲಿ ಎಂದು ಹಾರೈಸಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುಜಾತಾ ಸದಾರಾಮ್, ಶಿಕ್ಷಕ–ಶಿಕ್ಷಕೇತರ ವೃಂದದ ಸದಸ್ಯರು ವಿದ್ಯಾರ್ಥಿಗಳು ಹಾಗೂ ಪಾಲಕ – ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿ ಧ್ರುವ ಉಪಸ್ಥಿತರಿದ್ದ ಸರ್ವರನ್ನು ಸ್ವಾಗತಿಸಿದರೆ, ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶಿಕ್ಷಕಿಯರಾದ ದೀಪಾ,  ಅರ್ಚನಾ, ವಿನಯ ಹಾಗೂ ಪ್ರತಿಭಾರವರು ವಾಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿ ಶುಭಾನ್ ನಿರ್ವಹಿಸಿದರೆ, ವಿದ್ಯಾರ್ಥಿನಿ ರಿತ್ವಿಕಾ ಎಚ್. ತಿಂಗಳಾಯ ವಂದನಾರ್ಪಣೆಯನ್ನು ಮಾಡಿದ್ದರು.

Exit mobile version