ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡು ಸ್ಥಳೀಯ ಜನರಿಗೆ ಆತಂಕ ಮೂಡಿಸಿದ್ದ ಚಿರತೆಯೊಂದು ಶುಕ್ರವಾರ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಚಿರತೆ ಸೆರೆಗಾಗಿ ಹೇರೂರು ಗ್ರಾಮದ ಚಿಕ್ಕಾಡಿ ಎಂಬಲ್ಲಿರುವ ಖಾಸಗಿಯವರ ತೋಟದಲ್ಲಿ ಅರಣ್ಯ ಅಧಿಕಾರಿಗಳು ಗುರುವಾರ ಬೋನು ಇರಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ ಸುಮಾರು ಸುಮಾರು 3 ವರ್ಷ ಪ್ರಾಯದ ಹೆಣ್ಣು ಚಿರತೆ ಬೋನಿಗೆ ಬಿದ್ದಿರುವುದು ಕಂಡುಬಂದಿದೆ.
ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೆ. ಸದಾಶಿವ, ಗಸ್ತು ಅರಣ್ಯ ಪಾಲಕಿ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಭೇಟಿ ನೀಡಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.