ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕ್ರೀಡೆಯಿಂದ ಸಂಘಟನೆ ಇನ್ನಷ್ಟು ಬಲಗೊಳ್ಳುತ್ತದೆ. ಸದಸ್ಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಬಾಂಧವ್ಯ ಹೆಚ್ಚಾಗುತ್ತದೆ. ಕಳೆದ 49 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಚಟುವಟಿಕೆ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ರಾಜ್ಯಮಟ್ಟದ ಕ್ರೀಡೆಯನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ ಹೇಳಿದರು.
ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಬೆಣ್ಗೇರೆ ಗುಜ್ಜಾಡಿ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಎಸ್.ವಿ. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಚಾರೋಡಿ ಮೇಸ್ತ ಸಮಾಜ ಬಾಂಧವರ ರಾಜ್ಯ ಮಟ್ಟದ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ’ಚಾರೋಡಿ ಮೇಸ್ತ ಟ್ರೋಫಿ-2026’ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ರಾಮದಾಸ ಕೆ. ಮೇಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ. ರಾಘವೇಂದ್ರ ಪೈ ಮತ್ತು ಗಂಗೊಳ್ಳಿ ಪರ್ಸಿನ್ ಬೋಟ್ ಸ್ವ ಸಹಾಯ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ಶುಭ ಹಾರೈಸಿದರು.
ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್. ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ. ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಯೂತ್ ಕ್ಲಬ್ ಕಾರ್ಯದರ್ಶಿ ಸಂತೋಷ ಮೇಸ್ತ, ಪರ್ಸಿನ್ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಘವೇಂದ್ರ ವಿ.ಮೇಸ್ತ, ಕಾರವಾರದ ಉದ್ಯಮಿ ಜಯರಾಜ್ ಮೇಸ್ತ, ನಾಗಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮ ವಸಂತ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ಸುಂದರ ಜಿ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.