Site icon Kundapra.com ಕುಂದಾಪ್ರ ಡಾಟ್ ಕಾಂ

ಹೇರೂರು ಗ್ರಾಮೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಈ ಬಾರಿಯ ಬೈಂದೂರು ಉತ್ಸವದ ಅಂಗವಾಗಿ 43 ಗ್ರಾಪಂನಲ್ಲಿ ಗ್ರಾಮೋತ್ಸವ ನಡೆಸಲಾಗುತ್ತಿದ್ದು, ಆ ಭಾಗದ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಇಲ್ಲಿ ದೊರಕುವ ಪ್ರಯೋಜನ ಪಡೆಯಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. 

ಅವರು ಇಲ್ಲಿನ ಹೇರೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಹಾಗೂ ಬ್ಯಾಂಕಿಂಗ್ ಇಲಾಖೆಯ ಸಹಭಾಗಿತ್ವದಲ್ಲಿ ಶುಕ್ರವಾರ ನಡೆದ ಹೇರೂರು ಗ್ರಾಮೋತ್ಸವಕ್ಕೆ ಗೋಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬೈಂದೂರು ಉತ್ಸವದಲ್ಲಿ ಸಂಜೀವಿನಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂರು ಮಾರಾಟ ಮಳಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಂಭ್ರಮದಿಂದ ಭಾಗವಹಿಸುವುದರ ಮೂಲಕ ಮುಂದಿನ ಗ್ರಾಮೋತ್ಸವವನ್ನು ಸಂಜೀವಿನಿ ಸಂಘಗಳೇ ಮುನ್ನಡೆಸುವಷ್ಟು ಸಶಕ್ತವಾಗಬೇಕು ಎಂದರು.

ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಾಧಕ ಇಬ್ಬರು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಮತ್ತು ಸದಸ್ಯರು, ನೋಡೆಲ್ ಅಧಿಕಾರಿ ರಮೇಶ ಕುಲಾಲ್, ಶಾಂತಾರಾಮ ಶೆಟ್ಟಿ, ಸಂಜೀವಿನಿ ಅಧ್ಯಕ್ಷೆ ಚೈತ್ರಾ, ಬೈಂದೂರು ಉತ್ಸವ ಸಂಚಾಲಕ ಗಣೇಶ ಗಾಣಿಗ, ಅನಿತಾ ಆರ್. ಕೆ., ಬಾಬು ಆಚಾರ್ಯ ಮತ್ತಿತರರು ಇದ್ದರು.

ಗ್ರಾಪಂ ಪಿಡಿಒ ಗಿರಿಜಾ ಸ್ವಾಗತಿಸಿ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಪ್ರಾಸ್ತಾವಿಸಿದರು. ಹೇರೂರು ಕಾರ್ಯದರ್ಶಿ ರಂಗು ಮರಾಠಿ ವಂದಿಸಿದರು. ಸುಮಾ ಆಚಾರ್ಯ ನಿರೂಪಿಸಿದರು. 

ಸಾರ್ವಜನಿಕರಿಗೆ ಎ.ಜೆ. ಆಸ್ಪತ್ರೆಯ, ಆಯುರ್ವೇದದ, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ತೋಟಗಾರಿಕೆ ಬಗ್ಗೆ ಮಾಹಿತಿ ಮತ್ತು ಕೆಲವು ಆಯ್ದ ಫಲಾನುಭವಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಕೃಷಿ ಸಲಕರಣೆಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ಸಸ್ಯಗಳ ಪೋಷಣೆ ಮತ್ತು ಸಂರಕ್ಷಣೆ ಕುರಿತು, ಬ್ಯಾಂಕಿಂಗ್ ವಿಷಯಗಳು ಮತ್ತು ಶೂನ್ಯ ಠೇವಣಿಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹರಿಸುವ ಕುರಿತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರ ಸಬಲೀಕರಣದ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಯಿತು.

ಪಶು ಸಂಗೋಪನಾ ಇಲಾಖೆ ವತಿಯಿಂದ ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಚುಚ್ಚು ಮದ್ದು ನೀಡಲಾಯಿತು. ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಸ್ಪರ್ಧೆ, ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯಸ್ಥಾನಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮಧ್ಯಾಹ್ನ ಶಾಲಾ ಮಕ್ಕಳಿಂದ ಮತ್ತು ಸಂಜೀವಿನಿ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Exit mobile version