ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಗ್ರಾಮೋತ್ಸವಗಳನ್ನು ಆಯೋಜಿಸಬೇಕೆಂಬ ಕಲ್ಪನೆ ಸಾಕಾರಗೊಂಡಿದ್ದು, ಪ್ರತೀ ಗ್ರಾಮಗಳಲ್ಲಿಯೂ ಇದು ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಇಲಾಖೆಗಳು ಗ್ರಾಮಮಟ್ಟಕ್ಕೆ ಬಂದು ಜನರನ್ನು ಸ್ಪಂದಿಸುತ್ತಿದ್ದು, ಗ್ರಾಮದ ಜನರು ಎಲ್ಲವನ್ನೂ ಒಂದೇ ಸೂರಿನಡಿ ನೋಡುವಂತಹ ಸಾರ್ಥಕತೆ ಕಾಣುತ್ತಿದ್ದಾರೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಇಲ್ಲಿನ ಕೊಲ್ಲೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಬುಧವಾರ ಇಲ್ಲಿನ ಸ.ಹಿ.ಪ್ರಾ ಶಾಲಾ ಆವರಣದಲ್ಲಿ ನಡೆದ ಕೊಲ್ಲೂರು ಗ್ರಾಮೋತ್ಸವದಲ್ಲಿ ಮಾತನಾಡಿದರು. ಸಂಜೀವಿನಿ ಸಂಘ ಎನ್ನುವುದು ಮುಂದಿನ ದಿನಗಳಲ್ಲಿ ಒಂದು ಹೊಸ ಕ್ರಾಂತಿಯನ್ನು ಸೃಷ್ಠಿಸಲಿದೆ. ರಾಮ್‌ಜೀ ಯೋಜನೆಯಲ್ಲಿ ಬರುವ ಅತೀ ಹೆಚ್ಚು ವ್ಯವಸ್ಥೆಗಳನ್ನು ಸಂಜೀವಿನಿ ಹೆಸರಿನಲ್ಲಿ ನೀಡಲಾಗುತ್ತಿದೆ. ಸಂಜೀವಿನಿ ಕೇವಲ ಹಣಕಾಸಿನ ವ್ಯವಹಾರ ಎಂದು ಕೆಲವರು ತಿಳಿದುಕೊಂಡಿರಬಹುದು ಆದರೆ ಇದೊಂದು ಇತರೇ ಆದಾಯದ ಸ್ವರೂಪವಾಗಿದ್ದು, ಗ್ರಾಮೀಣ ಜೀವನೋಪಾಯ ಇಲಾಖೆಯಾಗಿದೆ. ಮುಂದಿನ ದಿನಗಳಲ್ಲಿ ಸಂಜೀವಿನಿ ಸಂಘದವರೇ ಗ್ರಾಮೋತ್ಸವವನ್ನು ಆಯೋಜಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಪ್ರಸನ್ನಾ ಶರ್ಮಾ ಉದ್ಘಾಟಿಸಿದರು. ಇಬ್ಬರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಸಂಗೀತಾ ಶೆಟ್ಟಿ ಮಹಿಳಾ ಸಬಲೀಕರಣದ ಬಗ್ಗೆ ಉಪನ್ಯಾಸ ನೀಡಿದರು.
ಕೊಲ್ಲೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಬುಧವಾರ ನಡೆದ ಕೊಲ್ಲೂರು ಗ್ರಾಮೋತ್ಸವದಲ್ಲಿ ಸ್ವಾವಲಂಭಿ ಮಹಿಳೆ ಪೂರ್ಣಿಮಾ ಹಾಗೂ ಪಶುಸಖಿ ಸುಷ್ಮಾ ಶೇರುಗಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ನಾಗೇಶ ದಳಿ ಹಾಗೂ ಸರ್ವ ಸದಸ್ಯರು, ಕೆಡಿಪಿ ಸದಸ್ಯೆ ಗ್ರೀಷ್ಮಾ ಭಿಡೆ, ಎಸ್‌ಡಿಎಂಸಿ ಅಧ್ಯಕ್ಷ ಯೋಗೀಶ ಭಟ್, ಮುಖ್ಯಶಿಕ್ಷಕಿ ಸುಮಿತ್ರಾ ಶೆಟ್ಟಿ, ಗ್ರಾಮಲೆಕ್ಕಿಗ ವೀರೇಶ್, ಸಂಜೀವಿನಿ ಅಧ್ಯಕ್ಷೆ ಅಂಬಿಕಾ ಬಾಳಿಗ ಇದ್ದರು. ಗ್ರಾಪಂ ಸದಸ್ಯ ಶಿವರಾಮಕೃಷ್ಣ ಭಟ್ ಸ್ವಾಗತಿಸಿ, ಪಿಡಿಒ ಸತೀಶ ತೋಳಾರ್ ವಂದಿಸಿದರು. ಶಿಕ್ಷಕ ಎನ್. ಚಂದ್ರ ಕೊಠಾರಿ ನಿರೂಪಿಸಿದರು.
ಸಾರ್ವಜನಿಕರಿಗೆ ಕೆಎಂಸಿ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆಗಳು ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅರ್ಹ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು. ಪಶು ಮತ್ತು ಹೈನುಗಾರಿಕೆ ಇಲಾಖೆಯಿಂದ ಜಾನುವಾರು ಪ್ರದರ್ಶನ ನಡೆಯಿತು. ಮೆಸ್ಕಾಂ ಅಧಿಕಾರಿಗಳು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.