Kundapra.com ಕುಂದಾಪ್ರ ಡಾಟ್ ಕಾಂ

ಶಂಕರನಾರಾಯಣ ಪ್ರೌಢಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ರೊಜೆಕ್ಟರ್‌ ಮತ್ತು ಲ್ಯಾಪ್‌ ಟಾಪ್ ಕೊಡುಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ 2006ನೇಯ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ 80,000 ರೂ. ಮೊತ್ತದ ಪ್ರೊಜೆಕ್ಟರ್ ಮತ್ತು ಲ್ಯಾಪ್‌ ಟಾಪ್ ಕೊಡುಗೆಯಾಗಿ ಇತ್ತೀಚಿಗೆ ನೀಡಿದರು.

ಶಾಲೆಯ ಉಪಪ್ರಾಂಶುಪಾಲರಾದ ರಂಜೀತ್ ಬೋಳಾರ್ ಮತ್ತು ನಿಕಟಪೂರ್ವ ಉಪಪ್ರಾಂಶುಪಾಲರಾದ ಮೋಹನ್ ರಾವ್ ಎಂ.ಜೆ. ಸಂಸ್ಥೆಯೊಂದಿಗಿನ ಸವಿನೆನಪು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಸಿಹಿಯೂಟ ನೀಡಿದರು. ಜೊತೆಗೆ ಮುಂದೆಯೂ ಶಾಲಾ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಜೊತೆಗಿರುವುದಾಗಿ ಭರವಸೆ ನೀಡಿದರು. ತಾವು ಕಲಿತ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಾಧಾರಿತ ಶಿಕ್ಷಣದ ಪ್ರಯೋಜನವನ್ನು ಪಡೆಯಬೇಕೆಂಬ ಉದಾತ್ತ ಧ್ಯೇಯದಿಂದ ಕೊಡುಗೆಯನ್ನು ನೀಡಿದ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳ ಶಾಲಾಭಿಮಾನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು.

ಅವರ ಗುರುಗಳಾದ ಉದಯ ಕುಮಾರ್ ರಾಯ್ಕರ್ ಅವರು ತಮ್ಮ ಶಿಷ್ಯರ ಸಾಧನೆ ಮತ್ತು ಔದಾರ್ಯದ ಬಗ್ಗೆ ಮಾತನಾಡಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಪ್ರಭಾ, ಪೋಷಕರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಕೃಷ್ಣ ಡಿ. ಎಸ್. ಸ್ವಾಗತಿಸಿದರು.

Exit mobile version