Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ರಿ. ಬೈಂದೂರು ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲೆಯ ವಿವಿಧ ಪ್ರಕಾರಗಳನ್ನು ಕಲಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತಿರುವ ಸುರಭಿ ಸಂಸ್ಥೆ ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯದಲ್ಲಿ ತೊಡಗಿದೆ. ಕಲೆ ಉಳಿಯಬೇಕಾದರೆ ಅದರ ಬಗ್ಗೆ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಸಾಂಸ್ಕೃತಿಕ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಅವರು ಬೈಂದೂರು ಸುರಭಿಯ ರಜತ ವರ್ಷದ ಪ್ರಯುಕ್ತ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಶಿಕ್ಷಣವು ವ್ಯಕ್ತಿಯಲ್ಲಿ ಸಂಸ್ಕಾರ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ. ಶಿಕ್ಷಣದ ಜತೆಗೆ ಕಲಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆತ ಮತ್ತಷ್ಟು ಕ್ರಿಯಾಶೀಲನಾಗುತ್ತಾನೆ ಎಂದರು.

ಉದ್ಯಮಿ ಡಾ. ಗೋವಿಂದಬಾಬು ಪೂಜಾರಿ ಶುಭಾಶಂಸನೆ ಮಾಡಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗೋವಿಂದ ಎಂ. ಆಶಯ ನುಡಿಗಳನ್ನಾಡಿದರು. ಉದ್ಯಮಿ ರಾಜು ಪೂಜಾರಿ ಗರ್ಜಿನಹಿತ್ತು, ರಂಗಕರ್ಮಿ ಸತ್ಯನಾ ಕೊಡೇರಿ, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸುನೀಲ್ ಎಚ್.ಜಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು. ನಿರ್ದೇಶಕ ಸುಧಾಕರ ನಿರೂಪಿಸಿದರು. ಪ್ರಥಮ ಪ್ರಶಸ್ತಿ ವಿಜೇತ ಕ್ರಾನಿಕಲ್ ಆಫ್ ಇಂಡಿಯಾ ಬೆಂಗಳೂರು ತಂಡದ ಗಣೇಶ ಮಂದಾರ್ತಿ ನಿರ್ದೇಶನದ ‘ಶಿವೋಹಂ’ ಮರು ಪ್ರದರ್ಶನಗೊಂಡಿತು.

Exit mobile version