Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಚಿಟ್ ಫಂಡ್ ಹೆಸರಿನಲ್ಲಿ ಮೋಸ – ಹಣ ಮರಳಿ ಪಡೆದ ಮಹಿಳೆಯರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಚಿಟ್ ಫಂಡ್ ನಲ್ಲಿ ‘ಸಾವಿರ ಪಾವತಿಸಿದರೆ ಲಕ್ಷ ಸಾಲ ನೀಡುವುದಾಗಿ ಹೇಳಿದ್ದನ್ನು ನಂಬಿದ್ದ ನಾಡ ಪಡುಕೋಣೆಯ ಒಂಬತ್ತು ಮಹಿಳೆಯರನ್ನು ಯಾಮಾರಿಸಿದ ಘಟನೆ ನಡೆದಿದೆ. ಗಂಗೊಳ್ಳಿ ಪೊಲೀಸರ ಕ್ಷೀಪ್ರ ಕಾರ್ಯಚರಣೆಯಿಂದಾಗಿ ಮೂರು ತಿಂಗಳಿಂದ ಕಾಯುತ್ತಿದ್ದ ಚಿಟ್ ಫಂಡ್ ಹಣ 10 ಗಂಟೆಯಲ್ಲಿ ಮರಳಿ ಪಡೆಯುವಂತಾಗಿದೆ.

ಆಗಿದ್ದೇನು?
ಪಡುಕೋಣೆಯ ಮಹಿಳೆಯರು ತಮ್ಮ ಪರಿಚಯದ ಮಹಿಳೆ ಮೂಲಕ ಯಾವುದೋ ಅನಾಮಧೇಯನನ್ನು ಚಿಟ್ ಫಂಡ್ ಸಂಸ್ಥೆಯೊಂದರ ಉಡುಪಿ ಜಿಲ್ಲಾ ಮೆನೆಜರ್ ಎಂದು ನಂಬಿ ಚಿಟ್ ಫಂಡ್‌ಗೆ ಹಣ ನೀಡಿದ್ದರು. ಕೆಲವು ಸಮಯದ ಬಳಿಕ ಸಂಪರ್ಕಕ್ಕೆ ಸಿಗದ ಆತ ಊರು ಬಿಟ್ಟಿದ್ದ ಮೋಸ ಹೋಗುತ್ತಿದ್ದೇವೆ ಎಂದು ಅಂದಾಜಾಗಿ ಕಟ್ಟಿದ ಹಣ ಮರಳಿ ಕೇಳಿದರು.

ಸತತ ಮೂರು ತಿಂಗಳಿನಿಂದ ಹಣ ವಾಪಸು ನೀಡುವಂತೆ ದುಂಬಾಲು ಬಿದ್ದರೂ ಕಟ್ಟಿಸಿಕೊಂಡಾತ ಹಣ ನೀಡಿಲ್ಲ. ಹಾಗಾದರೆ ಒಪ್ಪಂದದಂತೆ ಸಾಲ ಕೊಡಿ ಎಂದಾಗ, ಸರಕಾರಿ ನೌಕರರ ಭದ್ರತೆ ಬೇಕು ಎಂದು ಕೇಳಿದ. ಇತ್ತ ಸಾಲವೂ ಇಲ್ಲ ಅತ್ತ ಹಣವೂ ವಾಪಸ್‌ ಇಲ್ಲ ಎಂದಾಯಿತು. ಇದರಿಂದ ನೊಂದು ಗಂಗೊಳ್ಳಿ ಠಾಣೆಗೆ ಮಹಿಳೆಯರು ಬಂದು ಮನವಿ ಮಾಡಿದರು. ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ ಟೆಬಲ್ ಚಂದ್ರು ಹಾಗೂ ಮಂಜುನಾಥ ಅವರು ಸಮಸ್ಯೆ ಆಲಿಸಿ, ಚಿಟ್ ಫಂಡ್ ನ ಬೆಂಗಳೂರು ಗ್ರಾಹಕ ಕೇಂದ್ರದ ಸಂಪರ್ಕ ಸಾಧಿಸಿ, ಮುಖ್ಯಪ್ರಬಂಧಕರನ್ನು ಸಂಪರ್ಕಿಸಿದರು. ಆದರೆ ಆತ ಅದಾಗಲೇ ಉದ್ಯೋಗ ತೊರೆದಿದ್ದ. ಬೇರೆ ಚಿಟ್ ಫಂಡ್ ಗೆ ಸೇರಿದ್ದ.

ಆತನನ್ನು ಪತ್ತೆ ಹಚ್ಚಿ ಹಾವೇರಿ ಜಿಲ್ಲೆ ಠಾಣೆಗೆ ಮಾಹಿತಿ ನೀಡಿ, ಕರೆಸಿ ವಿಚಾರಣೆ ನಡೆಸಿದರು. ಪೊಲೀಸರ ಬಳಿ ಆತ ಅಷ್ಟೂ ಮೊತ್ತ ವಾಪಸ್‌ ನೀಡುವುದಾಗಿ ಹೇಳಿದರು. ದೂರು ಬೇಡ ಕಟ್ಟಿದ ಹಣ ಬಂದರೆ ಸಾಕು ಎಂದು ಪಡುಕೋಣೆಯ ಮಹಿಳೆಯರು ಹೇಳಿದ್ದು 19,000 ಮೊತ್ತ 9 ಮಹಿಳೆಯರಿಗೆ ಪಾವತಿಸಲಾಯಿತು. ಮೂರು ತಿಂಗಳಿಂದ ಕಾಯುತ್ತಿದ್ದ ಮೊತ್ತ 10 ಗಂಟೆಯಲ್ಲಿ ಮರಳಿ ದೊರೆಯಿತು. ಠಾಣೆಯ ಪಿಎಸ್‌ಐ ಪವನ್ ನಾಯಕ್ ಹಾಗೂ ಕರ್ತವ್ಯದಲ್ಲಿದ್ದ ಸಿಬಂದಿಗೆ ಅಭಿನಂದನೆ ಸಲ್ಲಿಸಿದರು.

ಚಿಟ್ ಫಂಡ್ ಅಂತಹ ಯಾವುದೇ ಅನಾಮಧೇಯ ವ್ಯಕ್ತಿ, ಕರೆ ಕಂಡು ಬಂದರೆ ಮೊತ್ತ ಹಾಕದೇ ಠಾಣೆಗೆ ಮಾಹಿತಿ ನೀಡಿ. 112ಗೆ ಕರೆ ಮಾಡಿ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version