Site icon Kundapra.com ಕುಂದಾಪ್ರ ಡಾಟ್ ಕಾಂ

ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಖಾಸಗಿ ಬಸ್‌ಗಳನ್ನು ಓವರ್‌ಟೇಕ್ ಮಾಡುವ ವೇಳೆ ಬೈಕ್ ಸವಾರ ಯುವಕ ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್‌ಗೆ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಶೆಟ್ರಕಟ್ಟೆ ತಿರುವಿನಲ್ಲಿ ಶನಿವಾರ ನಡೆದಿದೆ. ಸೌಕೂರು ನಿವಾಸಿ ವಿಜಯ್ ದೇವಾಡಿಗ (26) ಮೃತ ಯುವಕ.

ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯ್ ಶನಿವಾರ ಬೆಳಿಗ್ಗೆ ಬೈಕಿನಲ್ಲಿ ತ್ರಾಸಿಯಿಂದ ಸೌಕೂರು ಕಡೆಗೆ ತೆರಳುತ್ತಿದ್ದ ವೇಳೆ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಅನ್ನು ಓವರ್‌ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ವಿಜಯ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವೆ ಶೆಟ್ರಕಟ್ಟೆಯಲ್ಲಿ ನಡೆದ ಅಪಘಾತದ ಕರಾಳತೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version