Kundapra.com ಕುಂದಾಪ್ರ ಡಾಟ್ ಕಾಂ

ಬದುಕಿನ ಬದಲಾವಣೆಗೆ ಉತ್ಸವ ನಾಂದಿಯಾಗಲಿ: ಬೈಂದೂರು ಉತ್ಸವ ಉದ್ಘಾಟಿಸಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉತ್ಸವಗಳು ಬದುಕಿನ ಬದಲಾವಣೆಗೆ ನಾಂದಿಯಾಗಲಿ. ಸನ್ಮಾರ್ಗದಲ್ಲಿ ಬದುಕುವ ಜತೆಗೆ ಧರ್ಮದ ಹಾದಿಯಲ್ಲಿ ಸಾಗುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶನಿವಾರ ಬೈಂದೂರು ಉತ್ಸವ ಸಮಿತಿ ನೇತೃತ್ವದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಆಯೋಜಿಸಲಾದ ಮೂರು ದಿನಗಳ ಕಾಲ ಬೈಂದೂರು ಉತ್ಸವ -2026 ಉದ್ಘಾಟಿಸಿ ಮಾತನಾಡಿ ಕಲೆಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬೈಂದೂರು ಬಹಳ ಹಿಂದಿನಿಂದಲೂ ಪ್ರಸಿದ್ದಿ ಪಡೆದಿದೆ. ಹತ್ತಾರು ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಸ್ಥಳಗಳು ಬೈಂದೂರಿನಲ್ಲಿದೆ ಶ್ರೀ ಕ್ಷೇತ್ರದ ವತಿಯಿಂದ ಇವುಗಳ ಅಭಿವೃದ್ಧಿಗೆ ನಿರಂತರ ಸಹಾಯ ನೀಡಲಾಗಿದೆ ಎಂದರು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕೊಲ್ಲೂರು ಉಪನಗರವಾಗಿ ಬೈಂದೂರು ಬೆಳೆಯಬೇಕಿದೆ. ಪ್ರತಿ ಗ್ರಾಮಗಳಲ್ಲಿ ಗ್ರಾಮೋತ್ಸವ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಘಟಿಸಿ ಬೈಂದೂರು ಉತ್ಸವದಲ್ಲಿ ಸರಕಾರದ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿದ ಕಲ್ಪನೆ ಅತ್ಯುತ್ತಮವಾಗಿದೆ ಬೈಂದೂರು ಉತ್ಸವದಂತೆ ಈ ಉತ್ಸವ ಪ್ರತಿ ತಾಲೂಕಿನಲ್ಲೂ ಆಯೋಜಿಸುವಂತಾಗಲಿ ಎಂದರು.

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹಿಂಗಾರ ಅರಳಿಸಿ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ವಿಭಿನ್ನ ಪರಿಕಲ್ಪನೆಯ ಮೂಲಕ ಕಾರ್ಯಕ್ರಮ ಸಂಯೋಜಿಸಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ನೇರ ತಲುಪಿಸುವ ಕಾರ್ಯ ಬೈಂದೂರು ಉತ್ಸವದ ಮೂಲಕ ಆಗಿದೆ ಈ ಪರಿಕಲ್ಪನೆಯಲ್ಲಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಪರಿಶ್ರಮ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕೊಡ್ಗಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ. ರಾಮಚಂದ್ರ ಅಡಿಗ, ಕೆ. ಎನ್ ಶ್ರೀಧರ ಅಡಿಗ, ಕೆ.ಎನ್.ಸುಬ್ರಹ್ಮಣ್ಯ ಅಡಿಗ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಅನೀಲ್ ಕುಮಾರ್, ಬಿಸಿ ಟ್ರಸ್ಟ್ ಧರ್ಮಸ್ಥಳ ಉದ್ಯಮಿ ವೆಂಕಟೇಶ ಕಿಣಿ ಸೇರಿದಂತೆ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬೈಂದೂರು ಉತ್ಸವದ ವತಿಯಿಂದ ಸನ್ಮಾನಿಸಲಾಯಿತು.

ಸಂಸದ ಬಿ.ವೈ. ರಾಘವೇಂದ್ರ ಅವರು ವಿವಿಧ ಮಳಿಗೆ ಹಾಗೂ ವಸ್ತು ಪ್ರದರ್ಶನಗಳಿಗೆ ಚಾಲನೆ ನೀಡಿದರು.

ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಣುತ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version