ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಲ್ಕೂರ ರೆಫ಼್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ತಂಗದಗಡಿ ಅಂಬಾಗಿಲು ಉಡುಪಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೆ. ರಂಜನ್ ಕಲ್ಕೂರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ಮಾಡಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಸಂವಿಧಾನದ ಪರಿಚಯವನ್ನು ತಿಳಿಸುತ್ತಾ ಮಾತನಾಡಿದ ಕೆ. ರಂಜನ್ ಕಲ್ಕೂರ ಅವರು ದೇಶದ ಪ್ರಜೆಗಳು ತಮ್ಮ ಹಕ್ಕುಗಳನ್ನು ಅರಿತು ಆನಂದಿಸಬೇಕು. ಕರ್ತವ್ಯಗಳನ್ನು ಎಂದೂ ಮರೆಯಬಾರದು. ಧ್ವಜದ ಬಣ್ಣಗಳು ನಮ್ಮ ತ್ಯಾಗ ಶಾಂತಿ ಮತ್ತು ಸಸ್ಯಶ್ಯಾಮಲತೆ, ಪ್ರಗತಿಗಳ ಸಂಕೇತ. ನಮ್ಮಲ್ಲಿರುವ ಭಿನ್ನತೆಯನ್ನು ಗೌರವಿಸಲು ಅರಿಯಬೇಕು. ಆದರೆ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮರೆಯಬಾರದು. ರಜೆಯಲ್ಲಿ ಅಜ್ಜಿಯ ಮನೆಗೆ ಮಕ್ಕಳು ಹೋಗುವಂತೆ ಇಂದು ಕಾಡಿನಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅವುಗಳ ಅಜ್ಜಿಮನೆಯಾದ ಕಾಡನ್ನು ನಾಶ ಮಾಡಿದುದೇ ಈ ಕಾರ್ಯಕ್ಕೆ ಕಾರಣ. ಆದ್ದರಿಂದ ಸಾಧ್ಯವಾದಷ್ಟು ಕಾಡನ್ನು ಉಳಿಸಿ ಬೆಳೆಸಬೇಕು, ಜೊತೆಗೆ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಗತ್ಯ ಎಂದು ವಿವಿಧ ಕಥೆಗಳ ಮೂಲಕ ಮಕ್ಕಳಿಗೆ ತಿಳಿ ಹೇಳಿದರು.
ವಿದ್ಯಾರ್ಥಿನಿಯಾದ ವಿಜಯಲಕ್ಷ್ಮೀ ಈ ಸಮಯದಲ್ಲಿ ಮಾತನಾಡುತ್ತಾ ಸ್ವಾತಂತ್ರ್ಯವೆಂದರೆ ನಮಗೆ ನಾವೇ ನಿರ್ಮಿಸಿಕೊಂಡ ಶಿಸ್ತು. ವಿದ್ಯಾರ್ಥಿಗಳಾದ ನಮಗೆ ಉತ್ತಮ ಅಧ್ಯಯನದ ಮೂಲಕ ಸಾಕ್ಷರ-ವಿದ್ಯಾವಂತ ಸಮಾಜ ನಿರ್ಮಾಣವೇ ಪ್ರಧಾನವಾದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ, ದೇಶಭಕ್ತಿಯನ್ನು ಮೂಡಿಸುವ ಗೀತೆಗಳ ಗಾನ ಎಲ್ಲರ ಗಮನ ಸೆಳೆಯಿತು. ಕುಮಾರ ಸಂಗಮೇಶ್ ಬಿ.ವಿ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು. ಸೃಜನ್ ಆರ್. ಹೆಚ್. ಕಾರ್ಯಕ್ರಮ ನಿರೂಪಿಸಿದರು. ತಸ್ವೀ ಎಮ್. ಶೆಟ್ಟಿ ವಂದಿಸಿದರು.