ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದನ್ನು ತಾಲೂಕಿನ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆಹಾರ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೈಂದೂರಿನ ಆಹಾರ ನಿರೀಕ್ಷಕರಾದ ವಿನಯ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಬಿಜೂರು ಗ್ರಾಮದ ಹರಕೇರಿ ನಿವಾಸಿ ಅಬ್ದುಲ್ ಬಿನ್ ಅಬ್ಬಾಸ್ ಎಂಬುವವರ ಮನೆಯಲ್ಲಿ ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುವ ಅನ್ನಭಾಗ್ಯ ಯೋಜನೆಯ ಕುಚ್ಚಲಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು.
ಜನವರಿ 30 ರಂದು ಬೆಳಿಗ್ಗೆ 09:40 ಗಂಟೆಗೆ ಪಂಚರ ಸಮಕ್ಷಮದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ, ಒಟ್ಟು 16 ಪಾಲಿಥಿನ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ 7.14 ಕ್ವಿಂಟಾಲ್ ತೂಕದ ಕುಚ್ಚಲಕ್ಕಿ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ ರೂ. 16,422/- ಎಂದು ಅಂದಾಜಿಸಲಾಗಿದೆ.
ಆರೋಪಿ ಅಬ್ದುಲ್ ಬಿನ್ ಅಬ್ಬಾಸ್ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಯಾರಿಂದಲೋ ಕಾನೂನು ಬಾಹಿರವಾಗಿ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ. ವಶಪಡಿಸಿಕೊಂಡ ಅಕ್ಕಿ ಚೀಲಗಳನ್ನು ಅಧಿಕಾರಿಗಳು ತಲ್ಲೂರು TAMPMC ಗೋಡಾಮಿಗೆ ರವಾನಿಸಿ ಸುರಕ್ಷಿತವಾಗಿ ಇರಿಸಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

