ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಪಂಚಗಂಗಾವಳಿ ಬಳಗ ಬಂದರು ಇದರ 32ನೇ ವಾರ್ಷಿಕೋತ್ಸವ ಮತ್ತು ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ವತಿಯಿಂದ 22ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಪಂಚಗಂಗಾವಳಿ ಸ್ವಾಸ್ಥ್ಯನಿಧಿ ಯೋಜನೆ ವತಿಯಿಂದ 17ನೇ ವರ್ಷದ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಗಂಗೊಳ್ಳಿ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.
ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ ಶೆಟ್ಟಿ ಕೋವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿದ್ದ ಕುಂದಾಪುರ ಪುರಸಭೆ ಮ್ಯಾನೇಜರ್ ಸೂರ್ಯಕಾಂತ ಖಾರ್ವಿ, ಕೋಟ ಪರ್ಸಿನ್ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಂಕಿತ್ ಶೆಟ್ಟಿ, ಗಂಗೊಳ್ಳಿ ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷ ಜಿ. ಗೋಪಾಲ ಪೂಜಾರಿ, ಡಾ. ಸಪ್ತಮಿ ಕೆ. ಮರವಂತೆ ಮತ್ತು ಕ್ಲಿನಿಕಲ್ ಡಯಾಟಿಸಿಯನ್ ಎಂ. ಮನಿಲಾ ಶುಭ ಹಾರೈಸಿದರು.
ಇದೇ ಸಂದರ್ಭ ಪ್ರಸಿದ್ಧ ಮುಳುತಜ್ಞ, ಸಮಾಜಸೇವಕ ಈಶ್ವರ ಮಲ್ಪೆ ಮತ್ತು ಮುಳುಗುತಜ್ಞ ದಿನೇಶ ಖಾರ್ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಅರ್ಹ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪಂಚಗಂಗಾವಳಿ ಸ್ವಾಸ್ಥ್ಯನಿಧಿ ಯೋಜನೆ ವತಿಯಿಂದ 15 ಬಡ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗಂಗೊಳ್ಳಿ ಇದರ ಅಧ್ಯಕ್ಷ ನರಸಿಂಹ ದೇವಾಡಿಗ, ಗಂಗೊಳ್ಳಿಯ ಮತ್ಸ್ಯೋದ್ಯಮಿ ರಾಘವೇಂದ್ರ ಮೇಸ್ತ ಗುಜ್ಜಾಡಿ ಮತ್ತು ಯೋಗೀಶ್ ಆರ್ಕಾಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರೋಶನ್ ಎನ್. ಖಾರ್ವಿ ಸ್ವಾಗತಿಸಿದರು. ಸಜಿತ್ ಬಿ. ಸಂದೇಶ ವಾಚಿಸಿದರು. ಕಾರ್ಯದರ್ಶಿ ಜಿ.ಎಂ.ರಾಘವೇಂದ್ರ ಖಾರ್ವಿ ವರದಿ ವಾಚಿಸಿದರು. ಶೋಭಾ ಎಸ್. ಆರ್ಕಾಟಿ ಮತ್ತು ಪಲ್ಲವಿ ಸಂದೀಪ್ ಸನ್ಮಾನಿತರನ್ನು ಪರಿಚಯಿಸಿದರು. ಪಲ್ಲವಿ ಎನ್. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಆರ್. ವಂದಿಸಿದರು.

