Site icon Kundapra.com ಕುಂದಾಪ್ರ ಡಾಟ್ ಕಾಂ

ಕೋ. ಮ. ಕಾರಂತ ಪ್ರಶಸ್ತಿಗೆ ಬಳ್ಕೂರು ಜಯರಾಮ ಉಡುಪ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: “ಕುಂದಪ್ರಭ” ಸಂಸ್ಥೆಯಿಂದ, ಹಿರಿಯ ಪತ್ರಕರ್ತ, ತರಬೇತುದಾರ, ವಾಗ್ಮಿ, ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ನೀಡಲಾಗುತ್ತಿರುವ ಕೋ. ಮ. ಕಾರಂತ ಪ್ರಶಸ್ತಿಗೆ ಈ ವರ್ಷ ಪ್ರತಿಭಾವಂತ ಕುಂಚ ಕಲಾವಿದ, ಪ್ರಗತಿಪರ ಉದ್ಯಮಿ, ತಾಂತ್ರಿಕ ನಿರ್ದೇಶಕ, ಇಂಜಿನಿಯರ್ ಬಳ್ಕೂರು ಜಯರಾಮ ಉಡುಪರನ್ನು ಆಯ್ಕೆ ಮಾಡಲಾಗಿದೆ.

ರೇಖಾ ಚಿತ್ರ, ಚುಕ್ಕಿ ಚಿತ್ರ, ವ್ಯಂಗ್ಯ ಚಿತ್ರಕಾರರಾಗಿ ಖ್ಯಾತರಾದ ಅವರು ವೃತ್ತಿಯಲ್ಲಿ “ಮೇಕ್ ಇನ್ ಇಂಡಿಯಾ” ದೃಷ್ಟಿಕೋನ ಹೊಂದಿದವರಾಗಿದ್ದು, ದೇಶಕ್ಕಾಗಿ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಹೆಲಿಕಾಪ್ಟರ್, ವಿಮಾನ, ಕ್ಷಿಪಣಿ ಯೋಜನೆಗಳಿಗೆ ತಾಂತ್ರಿಕ ವಿನ್ಯಾಸ ನೀಡಿದವರು. ತೇಜಸ್ ಯುದ್ಧ ವಿಮಾನಕ್ಕಾಗಿ ಬ್ಯಾಕಪ್ ಡಿಸ್‌ಪ್ಲೇ ಯುನಿಟ್ ವಿನ್ಯಾಸ ಅಭಿವೃದ್ಧಿ ಪ್ರಮಾಣಿಕರಣ ಇವರ ಸಾಧನೆ. ಬೆಂಗಳೂರಿನ ಡಾಟಾ ಸೋಲ್ ಇನ್ನೋವೇಟಿವ್ ಲ್ಯಾಬ್‌ನ ಸ್ಥಾಪಕ ನಿರ್ದೇಶಕರಾಗಿರುವ ಇವರು, ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ಲೈವಿ ((Fly-Vi)) ಟೆಕ್ನಾಲಜೀಸ್ ಪ್ರೈ. ಲಿ. ನ ತಾಂತ್ರಿಕ ನಿರ್ದೇಶಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರ, ರೇಖಾ ಚಿತ್ರ, ವ್ಯಕ್ತಿ ಚಿತ್ರ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಈ ಪ್ರತಿಭಾವಂತ ಕುಂಚ ಕಲಾವಿದರ ನೂರಾರು ವ್ಯಂಗ್ಯ ಚಿತ್ರಗಳು ಕನ್ನಡ ಹಾಗೂ ಇಂಗ್ಲಿಷ್ ದೈನಿಕಗಳಲ್ಲಿ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

ಬಳ್ಕೂರಿನ ನಿವೃತ್ತ ಮುಖ್ಯ ಶಿಕ್ಷಕ, ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ| ಬಿ. ಸುಬ್ರಾಯ ಉಡುಪ, ದಿ| ಭಾಗೀರಥಿ ಉಡುಪ ಅವರ ಪುತ್ರ ಹಾಗೂ ಕುಂದಾಪುರ “ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್”ನ ಡಾ| ಬಿ. ವಿ. ಉಡುಪ ಅವರ ತಮ್ಮನಾಗಿರುವ ಜಯರಾಮ ಉಡುಪ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ಬಳ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು ಸರಕಾರಿ ಪ್ರೌಢಶಾಲೆ, ಭಂಡಾರ್‌ಕಾರ‍್ಸ್ ಪ. ಪೂ. ಕಾಲೇಜು ಶಿಕ್ಷಣ ಮುಗಿಸಿ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ. ಇ. (ಇಲೆಕ್ಟ್ರಿಕಲ್) ಶಿಕ್ಷಣ ಪಡೆದವರು.

ಬೆಂಗಳೂರಿನ ಎನ್‌ಕಂಪಾಸ್ ಎಲೆಕ್ಟ್ರಾನಿಕ್ ಪ್ರೈ.ಲಿ. ನಲ್ಲಿ ಡಿಸೈನ್ ಇಂಜಿನಿಯರ್ ಆಗಿ ನಂತರ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಂತರ ಸ್ವಂತ ಸಂಸ್ಥೆ ಸ್ಥಾಪಿಸಿದವರು.

ಹವ್ಯಾಸಿ ಚಿತ್ರ ಕಲಾವಿದರಾಗಿ ಭಾವಕ್ಕೆ ದಕ್ಕೆ ಆಗದಂತೆ ವ್ಯಕ್ತಿ ಚಿತ್ರಗಳನ್ನು ಚುಕ್ಕಿ ಗೆರೆಗಳನ್ನು ರಚಿಸುವಲ್ಲಿ ಅವರು ಪರಿಣಿತರು. ಕೋ. ಮ. ಕಾರಂತ ಪ್ರಶಸ್ತಿ ಪಡೆಯುತ್ತಿರುವ 26ನೇ ಸಾಧಕರು ಅವರಾಗಿದ್ದಾರೆ.

Exit mobile version