Kundapra.com ಕುಂದಾಪ್ರ ಡಾಟ್ ಕಾಂ

ಜೀವನದಲ್ಲಿ ಉಚ್ಚ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಿ: ಸ್ವಾಮಿ ಯುಗೇಶಾನಂದ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಪ್ರತಿಯೊಬ್ಬರಲ್ಲೂ ಅನಂತ ಶಕ್ತಿ ಅಡಗಿದೆ. ನಮ್ಮಲ್ಲಿ ನಾವು ನಂಬಿಕೆ, ಶ್ರದ್ಧೆ ಇಟ್ಟುಕೊಂಡು ಅದ್ಭುತ ಸಾಧನೆ ಮಾಡಲು ನಮ್ಮಲ್ಲಿರುವ ಶಕ್ತಿಯನ್ನು ಹೊರ ತೆಗೆಯಲು ಕಠಿಣ ಪರಿಶ್ರಮ ಪಡಬೇಕು. ಜೀವನದಲ್ಲಿ ಉಚ್ಛ ಆದರ್ಶಗಳನ್ನು ಮತ್ತು ಉನ್ನತ ಗುರಿಯನ್ನಿಟ್ಟುಕೊಳ್ಳಬೇಕು. ಜಾಗೃತ ಮನಸ್ಸು ನಮ್ಮದಾಗಬೇಕು. ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಬೇಕು. ಘನತೆ ಇರುವ ಕೆಲಸಗಳನ್ನು ಮಾಡಬೇಕು. ಧನಾತ್ಮಕ ಚಿಂತೆಗಳನ್ನು ಇಟ್ಟುಕೊಂಡು ನಮ್ಮ ಗುರಿ ಮತ್ತು ಕನಸುಗಳನ್ನು ಸಾಫಲ್ಯಗೊಳಿಸಲು ಪ್ರಯತ್ನಿಸಬೇಕು ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದ ಹೇಳಿದರು.

ಅವರು ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಗಂಗೊಳ್ಳಿ ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾನಿಧಿ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಸ್ವಾಮೀ ವಿವೇಕಾನಂದರು ಯುವಕರಲ್ಲಿ ಹುರುಪು-ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದರು. ವಯಸ್ಸಿನ ಎಲ್ಲೆ ಮೀರಿ ಪ್ರತಿಯೊಬ್ಬರೂ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಜೀವನ ನಿರ್ಮಿಸಿಕೊಳ್ಳಲು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕಟಿಬದ್ಧರಾಗಬೇಕು ಎಂದು ಹೇಳಿದರು.

ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ. ಯು.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಬಿ. ರಾಘವೇಂದ್ರ ಪೈ ಶುಭ ಹಾರೈಸಿದರು. ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಕಾರ್ಯದರ್ಶಿ ಎಚ್. ಗಣೇಶ ಕಾಮತ್, ಖಜಾಂಚಿ ಎನ್. ಅಶ್ವಿನ್ ನಾಯಕ್ ಉಪಸ್ಥಿತರಿದ್ದರು.

ಈ ಸಂದರ್ಭ ಸ್ವಾಮಿ ಯುಗೇಶಾನಂದ ಅವರನ್ನು ಗೌರವಿಸಲಾಯಿತು. ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿ.ಎಸ್.ವಿ.ಎಸ್. ಅಸೋಸಿಯೇಶನ್ ವತಿಯಿಂದ ಅರ್ಹ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್. ಸದಾಶಿವ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಅತಿಥಿಯನ್ನು ಪರಿಚಯಿಸಿದರು. ಸಹಶಿಕ್ಷಕಿ ದಿವ್ಯಶ್ರೀ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ಸುಜಾತಾ ಮತ್ತು ಜಯಶ್ರೀ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಉಷಾ ಖಾರ್ವಿ ವಂದಿಸಿದರು.

Exit mobile version