Kundapra.com ಕುಂದಾಪ್ರ ಡಾಟ್ ಕಾಂ

135 ದಿನ ಪೂರೈಸಿದ ಬೈಂದೂರು ರೈತ ಸಂಘದ ಧರಣಿ – ಉಡುಪಿ ಜಿಲ್ಲಾಧಿಕಾರಿ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 135 ದಿನ ಪೂರೈಸಿದ್ದು ಬುಧವಾರ ರೈತರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ ನೀಡಿದರು.

ರೈತ ಮುಖಂಡರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಡಳಿತದಿಂದ ರೈತರ ಬೇಡಿಕೆಗೆ ಪೂರ್ಣ ಸಹಮತ ನೀಡಲಾಗಿದೆ ಮಾತ್ರವಲ್ಲದೆ ರಾಜ್ಯ ಸರಕಾರಕ್ಕೆ ಸಂಪೂರ್ಣ ವರದಿ ನೀಡಿದ್ದು ಸರಕಾರದ ಮಟ್ಟದಲ್ಲಿ ಅಂತಿಮಗೊಳಿಸುವುದು ಬಾಕಿ ಉಳಿದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು ರೈತರ ಧರಣಿ ವರದಿ ಸರಕಾರದ ಗಮನದಲ್ಲಿದೆ ಎಂದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ತಿಂಗಳುಗಳಿಂದ ನೂರಾರು ರೈತರು ನ್ಯಾಯವನ್ನು ಆಗ್ರಹಿಸಿ ಬೀದಿಯಲ್ಲಿ ಕುಳಿತಿದ್ದಾರೆ. ಜಿಲ್ಲೆಯ ಪ್ರಮುಖರು ಪಕ್ಷಾತೀತವಾಗಿ ಸರಕಾರದ ಮಟ್ಟದಲ್ಲಿ ಗಮನ ಸೆಳೆಯಬೇಕು ಮಾತ್ರವಲ್ಲದೆ ಸರಕಾರ ಬಡ ರೈತರನ್ನು ಸತಾಯಿಸದೆ ಆದಷ್ಟು ಶೀಘ್ರ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನ‌ರ್ ರಶ್ಮಿ ಎಸ್.ಆರ್, ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ರೈತ ಮುಖಂಡರಾದ ಅರುಣ್ ಕುಮಾ‌ರ್ ಶಿರೂರು, ವೀರಭದ್ರ ಗಾಣಿಗ, ಪದ್ಮಾಕ್ಷ ಗೋಳಿಬೇರು, ಹೆರಿಯಣ್ಣ ಪೂಜಾರಿ, ಸುಭಾಷ್ ಗಂಗನಾಡು, ರಾಮ ಮಯ್ಯಾಡಿ, ಸ್ಕರಿಯನ್, ನಾರಾಯಣ ಪೂಜಾರಿ ಯಳಜಿತ್, ಪೌಲೂಸ್, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.

Exit mobile version