ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬಹುಮಹಡಿ ವಸತಿ ಸಮುಚ್ಚಾಲಯಗಳು ಕೊಳಚೆ ಹಾಗೂ ತ್ಯಾಜ್ಯದ ನೀರನ್ನು ಶುದ್ಧೀಕರಣದ ನಿರ್ವಹಣೆ ಮಾಡುವುದರೊಂದಿಗೆ ಮರು ಬಳಕೆ ಮಾಡಬೇಕು. ಒಂದೊಮ್ಮೆ ಕೊಳಚೆ ನೀರನ್ನು ಶುದ್ಧೀಕರಿಸದೆ ಎಲ್ಲಂದಲ್ಲಿ ನದಿ ತೋಡುಗಳಿಗೆ ಬಿಟ್ಟು ಜಲಮಾಲಿನ್ಯ ಉಂಟು ಮಾಡಿದರೆ ಅಂತವರ ಮೇಲೆ ಮುಂದಿನ ದಿನಗಳಲ್ಲಿನಿರ್ದಾಕ್ಷಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್‌ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 376 ಕ್ಕೂ ಹೆಚ್ಚು ಅಪಾರ್ಟ್ಮೆಂಟ್‌ಗಳು ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಹಿನ್ನೆಲೆ, ನಗರ ಸಭೆ ವತಿಯಿಂದ ನೋಟೀಸ್ ನೀಡಲಾಗಿದೆ. ಇವುಗಳಲ್ಲಿ 200 ಮಣಿಪಾಲ್‌ನಲ್ಲಿ, 105 ಉಡುಪಿ ನಗರದಲ್ಲಿ, 70 ಮಲ್ಪೆ ವ್ಯಾಪ್ತಿಯಲ್ಲಿದ್ದು, ಸಮುಚ್ಚಯದ ಮಾಲೀಕರು ತ್ಯಾಜ್ಯದ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಮುಂದಾಗಬೇಕು ಎಂದರು.

ನಗರಸಭಾ ವ್ಯಾಪ್ತಿಯ ಅಪಾರ್ಟ್ಮೆಂಟ್‌ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳು ಕೆಲವು ಅಪಾರ್ಟ್ಮೆಂಟ್‌ಗಳಲ್ಲಿ ಇವೆ. ಆದರೂ ಅವುಗಳನ್ನು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಲವು ಅಪಾರ್ಟ್ಮೆಂಟ್‌ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಜಲ ಮೂಲಗಳಲ್ಲಿ ಸೇರಿ ಸಂಪೂರ್ಣ ಕಲ್ಮಶವಾಗುತ್ತದೆ ಎಂದ ಅವರು, ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧಿಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಮತ್ತಿತರಗಳಿಗೆ ಮರುಬಳಕೆ ಮುಂದಾಗಬೇಕು ಎಂದರು.
ಸಮುದಾಯದವರು ನಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕೆಂಬ ಮನೋಭಾವವನ್ನು ಹೊಂದುವುದರೊಂದಿಗೆ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಹುಮಹಡಿ ವಸತಿ ಸಮುಚ್ಚಯಗಳು ತ್ಯಾಜ್ಯ ನೀರಿನ ಶುದ್ಧಿಕರಣ ಘಟಕಗಳನ್ನು ನಿರ್ವಹಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ನೈರ್ಮಲ್ಯ ಒಳಚರಂಡಿ ವ್ಯವಸ್ಥೆಗೆ ಈ ಹಿಂದೆ ಅಂದಾಜು 400 ಕೋಟಿ ರೂ. ವೆಚ್ಚ ದಲ್ಲಿ ಯೋಜನೆಯನ್ನು ರೂಪಿಸಿ, ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಸರಕಾರ ಈ ಬಗ್ಗೆ ಯಾವುದೇ ಒಪ್ಪಿಗೆ ದೊರೆತಿರುವುದಿಲ್ಲ. ಇಲ್ಲಿನ ಭೂ ಪ್ರದೇಶ ಏರಿಳಿತ ದಿಂದ ಹೆಚ್ಚಿನ ಅನುದಾನ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್ ಗಳ ಬಳಕೆ ಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್ ಯಂತ್ರಗಳ ಬಳಕೆಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು ಎಂದ ಅವರು,ರಾತ್ರಿ ವೇಳೆಗಳಲ್ಲಿ ತ್ಯಾಜ್ಯ ನೀರನ್ನು ನದಿ ತೋಡು ಗಳಿಗೆ ಬಿಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳಿಂದ ಕೆಲ ಬಾವಿ ಗಳ ನೀರು ಕಲುಷಿತಗೊಂಡಿದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದರು.
ನಗರ ವ್ಯಾಪ್ತಿಯ ವಸತಿ ಸಮುಚ್ಚಯಗಳ ತ್ಯಾಜ್ಯ ನಿರ್ವಹಣಾ ಘಟಕಗಳ ಇರುವಿಕೆ, ಅವುಗಳ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಘಟಕ ಇಲ್ಲದೆ ಇರುವುದು ಹಾಗೂ ಮುಂದಿನ ದಿನಗಳಲ್ಲಿ ಅವುಗಳ ವೈಜ್ಞಾನಿಕವಾಗಿ ತ್ಯಾಜ್ಯ ನೀರನ್ನು ನಿರ್ವಹಣೆ ಮಾಡುವುದರ ಬಗ್ಗೆ ಸವಿಸ್ತಾರವಾದ ವಿವರವನ್ನು ಸರ್ವೇ ಮಾಡುವುದರ ಮೂಲಕ 20 ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ನಗರಸಭೆ ಆಯುಕ್ತರು ಹಾಗೂ ಪ್ರಾದೇಶಿಕ ಪರಿಸರ ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಕೆ ಕೀರ್ತಿ ಕುಮಾರ್, ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.