ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಓದಿನಲ್ಲಿ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸಲು ನೆರವಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ್ ಹೆಚ್.ಜಿ. ಹೇಳಿದರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಇಲ್ಲಿನ ಎಸ್.ವಿ ಕಾಮರ್ಸ್ ಕ್ಲಬ್ ಮತ್ತು ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಆಶ್ರಯದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿನ ವಿಶೇಷ ಪರೀಕ್ಷಾ ಮಾರ್ಗದರ್ಶನ ಶಿಬಿರದ ಕಾರ್ಯಕ್ರಮ ‘ಪಯಣ’ವನ್ನು ಉದ್ಘಾಟಿಸಿ ಮಾತನಾಡಿದರು.

ಮಾರ್ಗದರ್ಶನವನ್ನು ನೀಡಿದ ನರೇಂದ್ರ ಎಸ್. ಗಂಗೊಳ್ಳಿ ಮಾತನಾಡಿ, ಪರೀಕ್ಷೆ ಎಂದರೆ ಭಯಪಡುವುದಾಗಲಿ ಅಥವಾ ಸಂಭ್ರಮ ಪಡುವುದಾಗಲಿ ಸಲ್ಲದು. ಇದೊಂದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಜೀವನದ ಒಂದು ಭಾಗ. ನಮ್ಮ ಸ್ಪರ್ಧೆ ಎನ್ನುವುದು ಅಂಕಗಳೊಂದಿಗೆ ಇರಲಿ ಎಂದು ಹೇಳಿದರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕಚೇರಿ ಸಹಾಯಕಿ ಯಮುನಾ ಮತ್ತು ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷ ಜಿ. ಗೋಪಾಲ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಿಂಧು ಖಾರ್ವಿ ಅತಿಥಿಗಳನ್ನು ಸ್ವಾಗತಿಸಿ, ಧನ್ಯ ಯು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.