Site icon Kundapra.com ಕುಂದಾಪ್ರ ಡಾಟ್ ಕಾಂ

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖಾಧಿಕಾರಿಗೆ ಖಡಕ್ ಸೂಚನೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದ ಹಳೇ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೇ ನಿಗದಿತ ಕಾಲ ಮಿತಿಯಲ್ಲಿ ಮುಕ್ತಾಯಗೊಳಿಸಲು ಸೂಚನೆ ನೀಡಿದರು.

ಮರವಂತೆ ಹೊರ ಬಂದರು ಕಾಮಗಾರಿ:
ರೂ.85 ಕೋಟಿ ಮೊತ್ತದ ಕಾಮಗಾರಿಯು ಪ್ರಸ್ತುತ ಪ್ರಗತಿಯಲ್ಲಿದ್ದು, ಬ್ರೇಕ್ ವಾಟರ್ ನಿರ್ಮಿಸಲು ಅಗತ್ಯವಿರುವ ವಿವಿಧ ಗಾತ್ರದ ಗ್ರಾನೈಟ್ ಕಲ್ಲುಗಳನ್ನು ಶೇಖರಿಸಲಾಗುತ್ತಿದೆ. ಟೆಟ್ರಾಪಾಡ್ ಕಾಸ್ಟಿಂಗ್, ಸ್ಲೋಪಿಂಗ್ ಹಾಗೂ ಟೋ ಬರ್ಮ್ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಅಧಿಕಾರಿಗಳು ನೀಡಿದ್ದು, ಕಾಮಗಾರಿಯನ್ನು ವೇಗಗೊಳಿಸಲು ಹಾಗೂ ಪೂರಕ ಕಾಮಗಾರಿಗಳಿಗೆ ಅನುದಾನದ ಪ್ರಸ್ತಾವನೆಯೊಂದಿಗೆ ಸೂಕ್ತ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚಿಸಿದರು.

ಗಂಗೊಳ್ಳಿ ಬಂದರಿನ ಆಧುನೀಕರಣ ಕಾಮಗಾರಿ ಪ್ರಾರಂಭ:
ಕೇಂದ್ರ ಪುರಸ್ಕೃತ ಯೋಜನೆಯಾದ ಗಂಗೊಳ್ಳಿ ಬಂದರು ಆಧುನಿಕರಣ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು ಹರಾಜು ಪ್ರಾಂಗಣ, ಆವರಣ ಗೋಡೆ ಕಾಮಗಾರಿ ಪ್ರಾರಂಭಿಸಲಾಗಿದ್ದು, ಉಳಿದ ಕಾಮಗಾರಿಗಳನ್ನು ತ್ವರಿತ ಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಜೆಟ್ ಪೂರ್ವ ಅಭಿವೃದ್ಧಿ ಕಾಮಗಾರಿ ಪ್ರಸ್ತಾವನೆ ಸಲ್ಲಿಸಿ:
ಕ್ಷೇತ್ರದ ಹೊಸ ಬೇಡಿಕೆಗಳಾದ ಡ್ರೆಜ್ಜಿoಗ್, ಬ್ರೇಕ್ ವಾಟರ್ ವಿಸ್ತರಣೆ, ಸಮುದ್ರ ಕೊರತೆ ತಡೆ ಗೋಡೆ, ಮೀನುಗಾರಿಕಾ ಕೊಂಡಿ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಮೀನುಗಾರರಿಂದ ಬೇಡಿಕೆ ಇರುವ ಎಲ್ಲಾ ಬಂದರು ಹಾಗೂ ಮೀನುಗಾರಿಕಾ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸಲು ಈಗಾಗಲೇ ಸಚಿವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಹಾಗಾಗಿ ಇದಕ್ಕೆ ಪೂರಕವಾಗಿ ಇಲಾಖೆ ವತಿಯಿಂದ ಬಜೆಟ್ ಪೂರ್ವ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಉಪಸ್ಥಿತರಿದ್ದರು.

Exit mobile version