Kundapra.com ಕುಂದಾಪ್ರ ಡಾಟ್ ಕಾಂ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ : ಕ್ಯಾಲೆಂಡರ್ ಬಿಡುಗಡೆ

ಕುಂದಾಪುರ: ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲೊಂದು, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊರತಂದಿರುವ 2016ನೇ ಸಾಲಿನ ಕ್ಯಾಲೆಂಡರ್ ಶಿಕ್ಷಕರಿಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದ್ದು ಸಂಗ್ರಹ ಯೋಗ್ಯ ದಿನದರ್ಶಿಯಾಗಿದೆ. ಈ ರೀತಿ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯನಿರ್ವಹಿಸಿದ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಜಿಲ್ಲಾ ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ ಹೇಳಿದರು. ಅವರು ವಡೇರಹೋಬಳಿ ಶಾಸಕರ ಮಾದರಿ ಶಾಲೆಯಲ್ಲಿ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ೨೦೧೬ನೇ ಸಾಲಿನ ಆಕರ್ಷಕ ಮುದ್ರಣದ ವಿನೂತನ ವಿನ್ಯಾಸದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಉಡುಪಿ ಡಯಟ್‌ನ ಪ್ರಾಂಶುಪಾಲ ಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಘದ ಕಾರ್ಯದರ್ಶಿಯಾಗಿ ೫ ವರ್ಷ ಸೇವೆ ಸಲ್ಲಿಸಿ ಬೈಂದೂರು ವಲಯದ ವಂಡ್ಸೆ ಶಿಕ್ಷಣ ಸಂಯೋಜಕರಾಗಿ ಪದೋನ್ನತಿ ಹೊಂದಿದ ಹಳನಾಡು ನಿತ್ಯಾನಂದ ಶೆಟ್ಟಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಿದರು. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಸಂತ ಶೆಟ್ಟಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸರ್ವಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿ ನಾಗರಾಜ ಕ್ಯಾಲೆಂಡರಿನ ವಿಶೇಷತೆಗಳನ್ನು ಪ್ರಶಂಸಿಸಿ ಶಿಕ್ಷಕರಿಗೆ ಈ ಕ್ಯಾಲೆಂಡರ್ ಕೈಗನ್ನಡಿ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ. ಸೀತಾರಾಮ ಶೆಟ್ಟಿ ಕುಂದಾಪುರ ವಲಯದಲ್ಲಿ ನಿರ್ಮಾಣವಾಗಲಿರುವ ಗುರುಭವನದ ಕುರಿತು ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅವರು ವಹಿಸಿದ್ದರು. ವೇದಿಕೆಯಲ್ಲಿ ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಣಾಧಿಕಾರಿಗಳಾದ ಉಮಾ, ನಾಗರಾಜ್, ನಿವೇದಿತಾ, ವೆಂಕಟೇಶ ನಾಯಕ್, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಚಂದ್ರ ನಾಯ್ಕ್, ಕ್ಯಾಲೆಂಡರ್ ಮುದ್ರಿಸಿಕೊಟ್ಟ ಜನಪ್ರತಿನಿಧಿ ವಾರಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ, ವಡೇರಹೋಬಳಿ ಶಾಲಾ ಪದವೀಧರೇತರ ಮುಖ್ಯ ಶಿಕ್ಷಕ ಬಿ. ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕುಂದಾಪುರ ವಲಯ ಪಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಯಾಡಿ ಸದಾರಾಮ ಶೆಟ್ಟಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ವಕ್ವಾಡಿ ವೇಣುಹೋಪಾಲ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಎಂ. ನಾಗರಾಜ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಟೀಚರ್ಸ್ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ಚೋನಾಳಿ ಸಂತೋಷಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರ ಸಂಘದ ಕೋಶಾಧಿಕಾರಿ ಶೇಖರ್ ಯು. ವಂದಿಸಿದರು.

Exit mobile version