ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊಂಕಣಿ ಭಾಷಾಭಿಮಾನದೊಂದಿಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳಗಿಸುವುದರಲ್ಲಿ ಕೊಂಕಣಿಗರು ಒಂದಾಗಿ ಸಾಮರಸ್ಯದಿಂದ ಬಾಳಿರಿ ಎಂದು ಶಿರೂರು ಅಧ್ಯಕ್ಷರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ ಹೇಳಿದರು.
ಅವರು ಶಿರೂರಿನ ಹಡವಿನಕೋಣೆ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು “ಕೊಂಕಣಿ ಸಂಭ್ರಮ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಭಾ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಕೊಂಕಣಿ ಭಾಷೆಯನ್ನು ಮನೆಮನೆಗಳಲ್ಲಿ ಮಾತಾಡುವ ಮುಖಾಂತರ ಎಲ್ಲರೂ ಸಮಾನತೆಯ ಭಾವನೆಯನ್ನು ಹೊಂದಿ. ಅಕಾಡೆಮಿ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾಮ ಪಂಚಾಯತ್ ಸದಸ್ಯ ಶಂಕರ ಡಿ. ಮೇಸ್ತ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರು ಮಹಮದ್, ಶಿರೂರು ಶ್ರೀ ವೆಂಕಟರಮಣ ದೇವಸ್ಥಾನ ಪದಾಧಿಕಾರಿಯಾದ ಪ್ರಸಾದ ಪ್ರಭು, ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯ ಮೋಹನ್ ರೇವಣ್ಕರ್, ಹಡವಿನಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಚ್ಚಿ ಮೊಹಮ್ಮದ್ ಮುಸ್ತಾಕ್, ಶಿರೂರು ಉದ್ಯಮಿ ಬಾಬುರಾವ್ ಕಾಮತ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಮಾಮ್ದು ಯಾಕೂಬ್, ಹೊಸೂರು ಮರಾಠಿ ಸಂಘದ ಸಂಚಾಲಕ ನಾಗಪ್ಪ ಮರಾಠಿ, ಅಕಾಡೆಮಿಯ ಸದಸ್ಯರಾದ ನವೀನ್ ಲೋಬೊ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವಿಧ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಮಾನಾಥ ಮೇಸ್ತ ಶಿರೂರು, ಶ್ರೀಕಾಂತ್ ಕಾಮತ್ ಶಿರೂರು, ಶ್ರೀ ಭಾತ್ಯ ಮೀರಾ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಾಗಿ ನಾಗೇಂದ್ರ ಕಾಮತ್ ಶಿರೂರು, ಸೌಂದಳೆ ಜುನೇದ್ ಶಿರೂರು ಮತ್ತು ಸಂಚಾಲಕ ಸದಸ್ಯರಾದ ಮಾಮ್ದು ಇಬ್ರಾಹಿಂ ಅವರನ್ನು ಅಭಿನಂದಿಸಲಾಯಿತು.
ಶಿರೂರಿನ ಕೊಂಕಣಿ ಭಾಷಿಕರ ಪರವಾಗಿ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ರಮಾನಾಥ ಮೇಸ್ತ ಶಿರೂರು ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿ ಸಂಚಾಲಕ ಸದಸ್ಯರಾದ ಮಾಮ್ದು ಇಬ್ರಾಹಿಂ ಧನ್ಯವಾದ ಗೈದರು.
ಕೊಂಕಣಿ ಮಾತನಾಡುವ ಶಿರೂರಿನ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.