Kundapra.com ಕುಂದಾಪ್ರ ಡಾಟ್ ಕಾಂ

ಅಪ್ಪಣ್ಣ ಹೆಗ್ಡೆ ಜನ್ಮದಿನ: ಪೈಲೂರು ಶ್ರೀನಿವಾಸ ರಾವ್ ಗೆ ಬಿ.ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ

ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕ. ದತ್ತಿನಿಧಿ ವಿತರಣೆಯಲ್ಲಿ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್

ಕುಂದಾಪುರ: ಪ್ರಸಕ್ತ ಆದರ್ಶ ನಾಯಕರ ಹಾಗೂ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮಾಜ ಸನ್ಮಾರ್ಗದಲ್ಲಿ ನಡೆಸುವ ನಾಯಕರಿಲ್ಲದೆ ಯುವ ಸಮಾಜಕ್ಕೆ ಉತ್ತಮ ದಾರಿ ತಿಳಿಯದೆ ದಿಕ್ಕು ತಪ್ಪುತ್ತಿದ್ದಾರೆ ಎಂದು ಕಾರ್ಕಳ ಬೈಲೂರು ಶ್ರೀ ರಾಮಕೃಷ್ಣಾಶ್ರಮ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್ ಅಭಿಪ್ರಾಯಪಟ್ಟಿದ್ದಾರೆ.

ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿನಿಧಿ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆ 81 ನೇ ಜನ್ಮ ದಿನಾಚರಣೆ ಮತ್ತು ದತ್ತಿ ನಿಧಿ ವಿತರಣೆಯಲ್ಲಿ ಆಶೀರ್ವಚನ ನೀಡಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕವಿದ್ದಂತೆ ಎಂದು ಬಣ್ಣಿಸಿದರು. ಸ್ವತಂತ್ರ್ಯ ನಂತರ ಈ ದೇಶ ಉತ್ತಮ ನಾಯಕರ ಅಭಾವ ಎದುರಿಸುತ್ತಿದ್ದು, ಅರ್ಪಣಾ ಮನೋಭಾವ ಬದಲು ದೋಚಿ ತಿನ್ನುವವರೇ ಹೆಚ್ಚಿದ್ದಾರೆ. ಇದರಿಂದ ಆದರ್ಶದ ದಾರಿ ತೋರಿಸುವ ನಾಯಕರಿಲ್ಲದಂತಾಗಿದೆ. ಬರೇ ಬುದ್ದಿ ಬೆಳೆದಿದೆಯೇ ಹೊರತು, ಹೃದಯ ಬೆಳೆದಿಲ್ಲ. ಹೃದಯ ವೈಶಾಲ್ಯತೆಯಿಂದ ಸಮಾಜ ಸನ್ಮಾರ್ಗದಲ್ಲಿ ನಡೆಸುವ ನಾಯಕತ್ವ ಗುಣ ಹುಟ್ಟಿತ್ತದೆ ಎಂದು ಹೇಳಿದರು.

ಬರೇ ಸ್ವಾರ್ಥವೇ ಎಲ್ಲೆಲ್ಲೂ ತುಂಬಿದ್ದು, ಪಶುಭಾವ, ಜ್ಞಾನ ಬಾವ, ದೈವತ್ವ ಬಾವದಲ್ಲಿ ಪಶು ಭಾವ ಹೋಗಿ, ದೇವತ್ವ ಭಾವ ಬರಬೇಕು. ಜ್ಞಾನ ಭಾವ ಮಾತ್ರ ಬೆಳೆದು, ಹೃದಯ ಭಾವ ಕ್ಷೀಣಿಸುತ್ತಿದೆ. ಪರ ಸುಖ, ಸಹೃದಯ ಮತ್ತು ಸಂಸ್ಕೃತಿ ಮೂಲಕ ಅಪ್ಪಣ್ಣೆ ಹೆಗ್ಡೆ ತಮ್ಮ ಬದುಕನ್ನು ಆದರ್ಶವಾಗಿ ರೂಪಿಸಿಕೊಳ್ಳುವ ಜೊತೆ ಸಾಮಾಜಕ್ಕೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಮಣಿಪಾಲ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ನಾಗರತ್ನ ಅಪ್ಪಣ್ಣ ಹೆಗ್ಡೆ ಇದ್ದರು. ಅಪ್ಪಣ್ಣ ಹೆಗ್ಡೆ ಅವರು ತಮ್ಮ ಮೊಮ್ಮಕ್ಕಳಿಗೆ ಆರ್ಶೀವಾದ ಮಾಡುವ ಮೂಲಕ ತಮ್ಮ 81 ಹುಟ್ಟು ಹಬ್ಬ ಆಚರಿಸಿಕೊಂಡರು.

ಇದೇ ಸಂದರ್ಭದಲ್ಲಿ ಸುಳ್ಯ ಪೈಲೂರು ಶ್ರೀನಿವಾಸ ರಾವ್ ಅವರಿಗೆ ಬಿ.ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಬಡ ರೋಗಿಗಳಿಗೆ ವೈದ್ಯಕೀಯ ಸಹಾಯ ಧನ ವಿತರಿಸಲಾಯಿತು. ಬಸ್ರೂರು ಶ್ರೀ ಶಾರದಾ ಕಾಲೇಜ್ ಪ್ರಾಂಶುಪಾಲ ಕೆ.ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ದೀಕ್ಷಾ ಪ್ರಾರ್ಥಿಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿ ನಿಧಿ ಆಡಳಿತ ವ್ಯವಸ್ಥಾಪಕ ರಾಮಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಹಳ್ನಾಡು ಪ್ರಕಾಶ್‌ಚಂದ್ರ ಶೆಟ್ಟಿ ಮತ್ತು ಅಕ್ಷಯ ಹೆಗ್ಡೆ ನಿರೂಪಿಸಿದರು. ನಿವೇದಿತಾ ಶಾಲೆ ಮುಖ್ಯಶಿಕ್ಷಕ ದಿನಕರ ಆರ್. ಪ್ರಶಸ್ತಿ ಪತ್ರ ವಾಚಿಸಿದರು.

Exit mobile version