ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಹಕಾರಿ ಸಂಸ್ಥೆಗಳ ಗುಣಮಟ್ಟ ಕಾಪಾಡುವಲ್ಲಿ ಸಹಕಾರಿಯ ಆಡಳಿತ ಮಂಡಳಿ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಸಹಕಾರಿ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಸಹಕಾರಿ ಕಾಯ್ದೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು. ಆಡಳಿತ ಮಂಡಳಿ ಸದಸ್ಯರು ತಮ್ಮ ಅಧಿಕಾರ ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಸಹಕಾರಿ ರಂಗವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಲು ಮತ್ತು ಸಹಕಾರಿ ಸಂಸ್ಥೆಗಳ ಗುಣಮಟ್ಟ, ಸೇವೆಯನ್ನು ಬೆಳೆಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಹೇಳಿದರು.

ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನ್ ಉಡುಪಿ ಇವರ ಸಹಯೋಗದೊಂದಿಗೆ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಸದಸ್ಯರಿಗಾಗಿ ತ್ರಾಸಿ ಪ್ರೆಸ್ಟೀಜ್ ಪ್ಯಾಲೇಸ್‌ನ ನಕ್ಷತ್ರ ಮಿನಿ ಹಾಲ್‌ನಲ್ಲಿ ಗುರುವಾರ ನಡೆದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಮಂಜುನಾಥ ಎಸ್.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನ್ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಮತ್ತು ಹಿರಿಯ ಸಹಕಾರಿ ಎಸ್. ರಾಜು ಪೂಜಾರಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಗುರುಸ್ವಾಮಿ ಅವರು, ನಿರ್ದೇಶಕರ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗೂ ಆಡಳಿತ ಮಂಡಳಿ ಸದಸ್ಯರ ಅಧಿಕಾರ ಮತ್ತು ಪ್ರಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.