ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯಲ್ಲಿ ಶುಕ್ರವಾರದಂದು ಶಾರದಾ ಪೂಜೆಯನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳು ಅವರವರ ಮನೆಯ ಕೈದೋಟಗಳಲ್ಲಿ ಬೆಳೆದ ಬಣ್ಣ ಬಣ್ಣದ ವಿವಿಧ ಹೂವುಗಳನ್ನು ತಂದು ವಿದ್ಯಾ ದೇವತೆಯಾದ ತಾಯಿ ಶಾರದೆಯನ್ನು ಹೂವುಗಳಿಂದ ಅಲಂಕರಿಸಿದರು. ಕಾರ್ಯಕ್ರಮದ ಉದ್ದಕ್ಕೂ ವಿದ್ಯಾರ್ಥಿಗಳು ಶ್ರೀ ಸಿದ್ಧಿ ವಿನಾಯಕ ಹಾಗೂ ದೇವಿ ಶಾರದೆಯ ಕುರಿತಾಗಿ ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ದೈವಿಕ ವಾತಾವರಣವನ್ನು ಮೂಡಿಸಿದರು.

ಶಾಲೆಯ ಸಹ ಶಿಕ್ಷಕರಾದ ರಾಮಕೃಷ್ಣ ಉಡುಪರು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಪಠಿಸಿ, ತಾಯಿ ಶಾರದೆಯ ಪೂಜೆಯನ್ನು ನೆರವೇರಿಸುವುದರ ಜೊತೆಗೆ ಮಕ್ಕಳಿಗೆ ತಾಯಿ ಸರಸ್ವತಿಯ ಮಹಿಮೆ ಮತ್ತು ವಿದ್ಯೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸರ್ವಾಂಗೀಣ ಪ್ರಗತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಶಾಲೆಯಲ್ಲಿ ಈ ರೀತಿಯ ಆಚರಣೆಯು ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬಿ, ಸಾಂಸ್ಕೃತಿಕ ಮೌಲ್ಯಗಳ ಪರಿಚಯವನ್ನು ಮಾಡಿಸಿ, ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತದೆ.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಯಿ ಶಾರದೆಯನ್ನು ಪೂಜಿಸಿ ವಿದ್ಯೆ ಹಾಗೂ ಬುದ್ಧಿಯನ್ನು ದಯಪಾಲಿಸುವಂತೆ ಮಾಡಲಾದ ಮಕ್ಕಳ ಮುಗ್ಧ ಮನಸ್ಸಿನ ಪ್ರಾರ್ಥನೆಯು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು.