ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ 79.00ಕಿ.ಮೀ. ನಲ್ಲಿ ಬಳ್ಕೂರು- ಕಂಡ್ಲೂರು ಮಧ್ಯದಲ್ಲಿ ವರಾಹಿ ನದಿಗೆ ನಿರ್ಮಿಸಲಾಗಿರುವ ಸೇತುವೆಯ ಮರು ನಿರ್ಮಾಣದ ಕುರಿತ ರಾಜ್ಯ ಸರಕಾರದ ನಿರ್ಧಾರಕ್ಕೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೊಡ್ಗಿ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಉಡುಪಿ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಅತಿ ಹತ್ತಿರದ ಈ ಮಾರ್ಗದ ಕಿ.ಮೀ 79.00ರಲ್ಲಿ ಬಳ್ಕೂರು – ಕಂಡ್ಲೂರು ಮಧ್ಯ ಸೇತುವೆ ಇದ್ದು ಇದು 1972ರಲ್ಲಿ ನಿರ್ಮಾಣಗೊಂಡಿದೆ.
ಸೇತುವೆಯು 10 ಅಂಕಣಗಳನ್ನು ಒಳಗೊಂಡಿದ್ದು ಒಟ್ಟು 312ಮೀ. ಉದ್ದವಿದೆ. ಈ ಸೇತುವೆ ಈಗಾಗಲೇ ಶಿಥಿಲ ಗೊಂಡಿರುವ ಕಾರಣ ಇದರ ಮೇಲೆ ಅಧಿಕ ಭಾರ ಹೊತ್ತ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯೊಂದಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಂಭವವಿದೆ. ಹೀಗಾಗಿ ಸೇತುವೆಯ ಮರುನಿರ್ಮಾಣಕ್ಕೆ ಅಂದಾಜು 40 ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವಂತೆ ಕೊಡ್ಗಿ, ಸಚಿವ ಸತೀಶ್ ಜಾರಕಿಹೊಳೆ ಅವರಲ್ಲಿ ವಿನಂತಿಸಿದ್ದರು.
ಶಾಸಕರ ಮನವಿಗೆ ಸಚಿವರು ಶೀಘ್ರವಾಗಿ ಸ್ಪಂದಿಸಿದ್ದು ಸೇತುವೆಯ ಮರು ನಿರ್ಮಾಣಕ್ಕೆ 55 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ.
ಬಳ್ಕೂರು – ಕಂಡ್ಲೂರು ನಡುವಿನ ಸೇತುವೆಯ ಪುನರ್‌ನಿರ್ಮಾಣ ಮತ್ತು ಪುನಶ್ವೇತನ ಕಾಮಗಾರಿಗಳಿಗೆ ಅನುಮೋದನೆ ದೊರಕಿರುವುದಕ್ಕೆ ಶಾಸಕರು ಹರ್ಷ ವ್ಯಕ್ತಪಡಿಸಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

