ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇವರ ಒಲುಮೆಗೆ ಪಾತ್ರರಾಗಲು ಮತ್ತು ದೇವರನ್ನು ಒಲಿಸಿಕೊಳ್ಳಲು ಭಜನೆ ಸುಲಭ ಮಾರ್ಗವಾಗಿದೆ. ಭಕ್ತಿಯಿಂದ ಮಾಡಿದ ಪ್ರತಿಯೊಂದು ಕಾರ್ಯ ದೇವರಿಗೆ ಸಲ್ಲುತ್ತದೆ. ಗುರುಗಳು ಹಾಗೂ ಹಿರಿಯರು ನಡೆದುಕೊಂಡು ಬಂದ ಸನ್ಮಾರ್ಗದಲ್ಲಿ ಮುನ್ನಡೆದು, ಪ್ರತಿನಿತ್ಯ ಮನೆಯಲ್ಲಿ ಭಜನೆ ಮಾಡುವ ಸಂಪ್ರದಾಯವನ್ನು ಬೆಳೆಸಿ ಮುನ್ನಡೆಸಿಕೊಂಡು ಬರಬೇಕು. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದಲ್ಲದೆ ಸಮಾಜದ ಒಗ್ಗಟ್ಟು ಹಾಗೂ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಮಂಜುನಾಥ ಖಾರ್ವಿ ಹೇಳಿದರು.
ಅವರು ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಇದರ ವತಿಯಿಂದ 81ನೇ ಮಹಾ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರವಾರ-ಮಂಗಳೂರುವರೆಗಿನ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ. ಮಾಜಿ ಸದಸ್ಯ, ಪತ್ರಕರ್ತ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗಮಿಸಿ ಶುಭ ಕೋರಿದರು.
ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ಗಂಗೊಳ್ಳಿ ಗ್ರಾಪಂ. ಸದಸ್ಯ ರಾಜೇಂದ್ರ ಶೇರುಗಾರ್, ಮಂಜುನಾಥ ಸಾಲಿಯಾನ್ ತ್ರಾಸಿ, ಬಡಾನಿಡಿಯೂರು ಗ್ರಾಪಂ. ಪಿಡಿಒ ನಾಗರತ್ನ, ಡಾ. ಸಪ್ತಮಿ ಕೆ. ಮರವಂತೆ ಮತ್ತು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಂಚಾಲಕ ಜಯಕರ ಪೂಜಾರಿ ಗುಲ್ವಾಡಿ ಶುಭಾಶಂಸನೆಗೈದರು.
ಇದೇ ಸಂದರ್ಭ ಡಾ. ಸಪ್ತಮಿ ಕೆ. ಮರವಂತೆ ಮತ್ತು ಜಯಕರ ಪೂಜಾರಿ ಗುಲ್ವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಂಗೊಳ್ಳಿಯ ಉದ್ಯಮಿ ರಾಜೇಶ ಪೂಜಾರಿ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ಗಂಗೊಳ್ಳಿ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಶ್ (ಅಯ್ಯಪ್ಪ), ಬೈಂದೂರು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಎನ್.ಡಿ., ಭಜನಾ ಪರಿಷತ್ ಗಂಗೊಳ್ಳಿ ವಲಯ ಅಧ್ಯಕ್ಷ ಜಗದೀಶ ಪೂಜಾರಿ, ಮತ್ಸ್ಯೋದ್ಯಮಿ ಅನಿಲ್ ಸಾಲ್ಯಾನ್, ದೇವಸ್ಥಾನದ ಅಧ್ಯಕ್ಷ ಗುರುರಾಜ್, ಕಾರ್ಯದರ್ಶಿ ವರದರಾಜ್ ಜಿ.ಟಿ. ಮತ್ತು ಅರ್ಚಕ ಕೃಷ್ಣ ಜಿ.ಟಿ. ಉಪಸ್ಥಿತರಿದ್ದರು. ದೇವಸ್ಥಾನದ ಮಾಜಿ ಅಧ್ಯಕ್ಷ ಸುಂದರ ಜಿ. ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.