ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಲೀಡ್ ಡಿಸ್ಟ್ರಿಕ್ಟ್ ಆಫೀಸರ್ ವಿಜಯಶ್ರೀ ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಿ ಸಾರ್ವಜನಿಕರಲ್ಲಿ ಬ್ಯಾಂಕಿಂಗ್, ಸುರಕ್ಷಿತ ಡಿಜಿಟಲ್ ವ್ಯವಹಾರಗಳು ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಹಾಗಾಗಿ ಖಾಸಗಿ ವೈ ಫೈ ಬಳಸುವಾಗ ಜಾಗೃತರಾಗಿ ಹಾಗೂ ಅಂತಹ ಸಂದರ್ಭದಲ್ಲಿ ಆನ್ಲೈನ್ ಮುಖಾಂತರ ಹಣಕಾಸಿನ ವ್ಯವಹಾರ ಮಾಡಲು ಹೋಗಬೇಡಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಹರೀಶ್ ಜಿ. ಅವರು ಹಣಕಾಸು ಮ್ಯೂಲ್ ಗಳ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಬೊಮ್ಮಯ್ಯ ಎಂ. ಮಾತನಾಡಿ, ಆರ್ಥಿಕ ಶಿಸ್ತು ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳುವ ಮಹತ್ವದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಚೈತ್ರ. ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಕೆನರಾ ಬ್ಯಾಂಕ್ ಆಫೀಸರ್ ನಿರಂಜನ್ ವಂದಿಸಿದರು.