Site icon Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ: ಅಂಗಡಿಯೊಂದರಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ತೆಕ್ಕಟ್ಟೆ ರಾ.ಹೆ-66ರ ಕನ್ನುಕರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಆಶ್ಲೇಷ ಆನ್‌ಲೈನ್ ಸೇವಾ ಕೇಂದ್ರ’ದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ತೆಕ್ಕಟ್ಟೆ ಶ್ರೀ ನವಶಕ್ತಿ ಕಲ್ಯಾಣ ಮಂಟಪದ ಬಳಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರದಲ್ಲಿ ಸೋಮವಾರ ರಾತ್ರಿ ಸುಮಾರು 9:15ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಲೀಕರಾದ ಫಣಿರಾಜ್ ಹತ್ವಾರ್ ಕೊರವಡಿ ಅವರು ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆ ಬಳಿಕ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿದ್ದು, ಅಂಗಡಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಸ್ಟೇಷನರಿ ವಸ್ತುಗಳು, ಇನ್ವರ್ಟರ್ ಬ್ಯಾಟರಿ, ಕುರ್ಚಿ, ಮೇಜು ಹಾಗೂ ಇತರ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಈ ಅಗ್ನಿ ಅವಘಡದಿಂದ ಅಂದಾಜು 6 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಕಣ್ಣುಕರೆಯ ವಾದಿರಾಜ್ ಗಾಣಿಗ, ಕಾರ್ತಿಕ್, ಶೇಖರ್ ದೇವಡಿಗ, ಭರತ್ ಮತ್ತು ವಿಘ್ನೇಶ್ ಸೇರಿದಂತೆ ಸ್ಥಳೀಯ ಯುವಕರ ತಂಡ ಬೆಂಕಿ ನಂದಿಸಲು ನೆರವಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.

Exit mobile version