Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಬಂದರು ಬೇಲಿಕೇರಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಹೆಬ್ಬಾವುಗಳು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದು ಜನರನ್ನು ಭಯಭೀತರನ್ನಾಗಿಸಿದೆ.

ಇತ್ತೀಚಿನ ದಿನಗಳಲ್ಲಿ ಗಂಗೊಳ್ಳಿಯ ಅಸುಪಾಸಿನಲ್ಲಿ ರಾತ್ರಿ ವೇಳೆ ದೊಡ್ಡ ಗಾತ್ರದ ಮತ್ತು ಚಿಕ್ಕ ಗಾತ್ರದ ಹೆಬ್ಬಾವುಗಳು ತುಂಬಾ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ನೋಡಿದ ಕ್ಷಣ ಮಾತ್ರದಲ್ಲಿ ಪೊದೆಗಳ ನಡುವೆ ನಿರ್ಜನ ಜಾಗದಲ್ಲಿ ಕಣ್ಮರೆಯಾದ ಕಾರಣ ಸಾಕಷ್ಟು ಹೆಬ್ಬಾವುಗಳು ಸೆರೆ ಹಿಡಿಯಲಾಗದೆ ತಪ್ಪಿಸಿಕೊಂಡಿದೆ.

ಭಾನುವಾರ ರಾತ್ರಿ ಗಂಗೊಳ್ಳಿ ಬಂದರು ಬೇಲಿಕೇರಿ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ದಾರಿ ಮದ್ಯ ಕಾಣಿಸಿಕೊಂಡಿದ್ದು, ಭಯಭಿತರಾದ ಅವರು ಕೂಡಲೇ ಉರಗ ತಜ್ಞ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಮಡಿ ನಾಗರಾಜ್ ಖಾರ್ವಿ ಅವರಿಗೆ ವಿಚಾರ ತಿಳಿಸಿದ್ದಾರೆ.

ನಾಗರಾಜ ಖಾರ್ವಿ ಅವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿಶ್ವನಾಥ್ ಗಂಗೊಳ್ಳಿ ಮತ್ತು ಗಣೇಶ್ ಖಾರ್ವಿ ಅವರ ಸಹಾಯದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದರು.

ಸೆರೆ ಹಿಡಿದ ಹೆಬ್ಬಾವು ಸುಮಾರು 11 ಕೆಜಿ ತೂಕವಿದ್ದು ಸುಮಾರು 10 ಅಡಿ ಉದ್ದ ಇದ್ದಿತು. ಪಾದಚಾರಿಗಳು ರಾತ್ರಿ ವೇಳೆ ಸಂಚರಿಸುವಾಗ ಆದಷ್ಟು ಜಾಗರೂಕರಾಗಿ ಸಂಚರಿಸುವಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಿಳಿಸಿದ್ದಾರೆ.

Exit mobile version