ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟೊಂದು ನೀರು ತುಂಬಿ ಮುಳುಗಡೆಯಾದ ಘಟನೆ ಕುಂದಾಪುರ ಹಾಗೂ ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ಸಂಭವಿಸಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟಿನ ಮೀನುಗಾರರು ರಕ್ಷಿಸಿದ್ದಾರೆ.
ಬೋಟಿನಲ್ಲಿದ್ದ ಮೀನುಗಾರರಾದ ಕುಮಟಾ ಮೂಲದವರಾದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಪಾರಾದವರು.
ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರ ಶ್ರೀ ದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಫೆ.24ರಂದು ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಎಂಜಿನಿನ ಅಡಿ ಭಾಗದಲ್ಲಿ ನೀರು ಒಳ ಬರಲು ಆರಂಭಿಸಿತು.
ನೀರು ತುಂಬಿ ಬೋಟಿನ ಎಂಜಿನ್ ಸ್ಥಗಿತಗೊಂಡಿದೆ. ಕೂಡಲೇ ಬೋಟಿನಲ್ಲಿದ್ದವರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಅನಂತರ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ಶ್ರೀ ಕೃಷ್ಣ ಬೋಟಿನವರು ಹಾಗೂ ಕೋಸ್ಟ್ ಗಾರ್ಡ್ ನವರು ಬಂದು ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಬಳಿಕ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದು ಗಂಗೊಳ್ಳಿ ಬಂದರಿನಿಂದ ಸುಮಾರು 8-9 ನಾಟಿಕಲ್ ಮೈಲು ದೂರದಲ್ಲಿ ಎಳೆದುಕೊಂಡು ಬರುವಾಗ ಗಾಳಿ ಹಾಗೂ ಅಲೆಗಳ ಅಬ್ಬರದಿಂದಾಗಿ ಹಗ್ಗ ತುಂಡಾಗಿ, ಬೋಟು ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಅಂದಾಜು 60-65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕ ನಾಗರಾಜ್ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

