ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದು ಸವಾರ ಮೃತಪಟ್ಟ ಘಟನೆ ಇಲ್ಲಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಾಗಿನಗುಡ್ಡೆ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಚಾರುಕೊಟ್ಟಿಗೆ ಮೇಲ್ ಮನೆ ನಿವಾಸಿ ಪ್ರತಾಪ ಶೆಟ್ಟಿ (42) ಮೃತ ದುರ್ದೈವಿ.
ಅವರು ಬ್ರಹ್ಮಾವರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು ಫೆ.24ರಂದು ರಾತ್ರಿ ಸುಮಾರು 8:30 ಗಂಟೆಯ ವೇಳೆಗೆ ಬ್ರಹ್ಮಾವರದಿಂದ ಮನೆ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಸ್ಕೂಟಿಯ ಹಿಂಭಾಗದಲ್ಲಿ ಕೃಷಿ ಸಾಮಗ್ರಿಗಳಾದ ಹಾರೆ, ಪಿಕಾಸೆ ಹಾಗೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಬುಟ್ಟಿಯನ್ನು ಕಟ್ಟಿ, ತೆಕ್ಕಟ್ಟೆ-ದಪ್ಪೆಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಾಗಿನಗುಡ್ಡೆ, ಬಸ್ ನಿಲ್ಯಾಣದ ಹತ್ತಿರ ತಲುಪುವಷ್ಟರಲ್ಲಿ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಬದಿಯ ಹೊಂಡದಂತಿರುವ ತೋಡಿಗೆ ಬಿದ್ದಿದ್ದಾರೆ.
ಘಟನೆಯ ಬಗ್ಗೆ, ಮಾಹಿತಿ ತಿಳಿದ ರತ್ನಾಕರ್ ಶೆಟ್ಟಿ (56) ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಪ್ರತಾಪ ಶೆಟ್ಟಿ ತೋಡಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ತಕ್ಷಣ ಸ್ಮಳೀಯರ ಸಹಾಯದಿಂದ ಅವರನ್ನು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ರಾತ್ರಿ ಸುಮಾರು 9:30 ಗಂಟೆಗೆ ಅವರನ್ನು ಮೃತ ಪಟ್ಟಿರುವುದಾಗಿ ದೃಡಪಡಿಸಿದರು.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

